ಕರ್ನಾಟಕದ ಪ್ರಾಣಿಸಂಪತ್ತು : ಮಾಮೇಲಿಯ ಎಂದರೆ ಸಸ್ತನಿ ವರ್ಗದ ಹಲವಾರು ಗಣಗಳ ಪ್ರತಿನಿಧಿಗಳು ಕರ್ನಾಟಕದಲ್ಲಿವೆ. ಇವುಗಳ ಹಾಗೂ ಇತರ ಪ್ರಾಣಿಗಳ ವಿವರಗಳನ್ನು ಮುಂದೆ ಬರೆದಿದೆ. ಮಾನವನನ್ನೊಳಗೊಂಡ (ಹೋಮೋ ಸೇಪಿಯನ್ಸ್‌) ಪ್ರೈಮೇಟ್ ಗಣ ಈ ವರ್ಗಕ್ಕೆ ಸಂಬಂಧಿಸಿದ್ದೇ. ಈ ಗಣದ ಆರು ಪ್ರೈಮೇಟುಗಳು ಕರ್ನಾಟಕದಲ್ಲಿವೆ. ಎಲ್ಲರಿಗೂ ಚಿರಪರಿಚಿತವಾಗಿರುವ ಕೋತಿ ಅಥವಾ ಕಪಿ ಇವುಗಳಲ್ಲೊಂದು. ಇದಕ್ಕೆ ಇಂಗ್ಲಿಷಿನಲ್ಲಿ ಬಾನೆಟ್ ಮಕಾಕ್ ಎಂದು ಹೆಸರು. ಇದು ವೈಜ್ಞಾನಿಕ ಹೆಸರು. ಇದರ ವೈಜ್ಞಾನಿಕ ಹೆಸರು ಮೆಕಾಕ ರೇಡಿಯೇಟ. ಕುಳಿತುಕೊಂಡಾಗ ಇದರ ಎತ್ತರ ಸುಮಾರು ೬೦ ಸೆಂಮೀ. ಬಾಲದ ಉದ್ದ ತಲೆ ಮತ್ತು ದೇಹದ ಉದ್ದಕ್ಕಿಂತಲೂ ಹೆಚ್ಚು. ಗಂಡಿನ ತೂಕ ಸುಮಾರು ೬ ರಿಂದ ೯ ಕೆ.ಜಿ.; ಹೆಣ್ಣಿನ ತೂಕ ೩-೪ ಕೆ.ಜಿ.; ಇವು ಸಾಮಾನ್ಯವಾಗಿ ಮನುಷ್ಯ ವಾಸಿಸುವ ನೆಲೆಗೆ ಹತ್ತಿರವಾಗಿ ಕಂಡುಬಂದರೂ ಕಾಡಿನಲ್ಲೂ ವಾಸಿಸುತ್ತವೆ. ಎರಡನೆಯದು ಸಿಂಗಲೀಕ. ಇದರ ಬಾಲ ಸಿಂಹದ ಬಾಲದಂತಿರುವುದರಿಂದ ಇದಕ್ಕೆ ಲಯನ್ ಟೈಲ್ಡ್‌ ಮಕಾಕ್ ಎಂದು ಹೆಸರು. ಇದರ ವೈಜ್ಞಾನಿಕ ನಾಮ ಮಕಾಕ ಸೈಲ್ನಸ್. ಇದರ ತಲೆ ಮತ್ತು ದೇಹ ಉದ್ದ ಸುಮಾರು ೫೦-೬೦, ಬಾಲ ೧೦-೧೫ ಸೆಂಮೀ. ಹೆಣ್ಣು ಗಂಡಿಗಿಂತ ಚಿಕ್ಕದು. ಇದು ಪಶ್ಚಿಮಘಟ್ಟ ಮತ್ತು ಉತ್ತರ ಕನ್ನಡ ಜಿಲ್ಲೆಗಳ ದಟ್ಟ ಕಾಡಿನಲ್ಲಿ ವಾಸಿಸುತ್ತವೆ. ಗಲ್ಲ ಮತ್ತು ಕೆನ್ನೆಗಳ ಮೇಲೆ ಉದ್ದವಾದ ಕಂದುಬಣ್ಣದ ಕೂದಲುಂಟು. ಇಡೀ ದೇಹದ ಮೇಲಿನ ಕೂದಲು ಮಿರುಗುವ ಕಪ್ಪು ಬಣ್ಣದ್ದು. ನಾಚಿಕೆಪಡುವ ಈ ಜೀವಿಗಳ ವಾಸ ಗುಂಪು ಗುಂಪಾಗಿ, ಒಂದೊಂದು ಗುಂಪಿನಲ್ಲೂ ಸುಮಾರು ೧೨ ರಿಂದ ೨೦ ಪ್ರಾಣಿಗಳಿರುತ್ತವೆ. ಮರಗಳ ಮೇಲೆಯೇ ಇವುಗಳ ಚಲನವಲನ. ಕೆಲವು ಸಂದರ್ಭಗಳಲ್ಲಿ ಇವು ಮರಗಳಿಂದ ಇಳಿದು ಭೂಮಿಯ ಮೇಲೂ ಓಡಾಡುತ್ತವೆ. ಇವನ್ನು ಪಳಗಿಸುವುದು ಕಷ್ಟ. ಮೂಸು ಅಥವಾ ಮುಸುವ ಎಂಬ ಮತ್ತೊಂದು ಬಗೆಯ ವೃಕ್ಷವಾಸಿ ಕಾಡುಗಳಲ್ಲಿ ಹಳ್ಳಿಗಳ ಬಳಿ ಕಂಡುಬರುತ್ತದೆ. ಹನುಮಾನ್ ಕೋತಿ ಇದರ ಪರ್ಯಾಯ ನಾಮ. ಕಾಮನ್ ಲಂಗೂರ್ ಎಂಬ ಸಾಮಾನ್ಯ ಇಂಗ್ಲಿಷ್ ಹೆಸರೂ ಪ್ರೆಸ್óಬೈಟಿಸ್ ಎಂಟೆಲಸ್ ಎಂಬ ವೈಜ್ಞಾನಿಕ ಹೆಸರೂ ಇದಕ್ಕಿವೆ. ಇದು ನೀಳಗಾಲಿನ ನೀಳಬಾಲದ ಕಪ್ಪುಮುಖದ ಕೋತಿ. ಇದು ಭಾರತಾದ್ಯಂತ ಹರಡಿದೆ. ಸಾಮಾನ್ಯವಾಗಿ ಕೊಳ ಮತ್ತು ದೇವಾಲಯಗಳ ಬಳಿ ಇರುವುದು ಹೆಚ್ಚು. ಕೆಲವೆಡೆ ಹಿಂದೂಗಳು ಈ ಕೋತಿಯನ್ನು ಪುಜಿಸುವುದೂ ಉಂಟು. ಇದರ ಆಹಾರ ಹೂ ಹಣ್ಣು ಮೊಗ್ಗು ಇತ್ಯಾದಿ. ಪ್ರೆಸ್óಬೈಟಿಸ್ ಜಾನಿ (ನೀಲಗಿರಿ ಲಂಗೂರ್) ಎಂಬ ಇನ್ನೊಂದು ಬಗೆಯ ಕೋತಿ ಕೊಡಗು ಮತ್ತು ಕೊಳ್ಳೇಗಾಲ ತಾಲ್ಲೂಕುಗಳ ಕಾಡುಗಳಲ್ಲಿ ಇದೆ. ಇದರ ತಲೆ ಹಳದಿ ಮತ್ತು ಕಂದುಬಣ್ಣದ ಮಿಶ್ರಣ. ಮೈಮೇಲಿನ ಕೂದಲು ಕಪ್ಪು ಮಿಶ್ರಿತ ಬೂದು. ಹಚ್ಚಹಸಿರು ತುಂಬಿದ ಬೆಟ್ಟಗುಡ್ಡ ಕಾಡುಗಳೇ ಇದರ ವಾಸಸ್ಥಾನs; ಕೆಲವು ವೇಳೆ ತೋಟ ಮತ್ತು ಸಾಗುವಳಿ ಪ್ರದೇಶಗಳಿಗೆ ನುಗ್ಗಿ ಹಾವಳಿ ಮಾಡುವುದೂ ಉಂಟು. ಇದರ ಸುಂದರವಾದ ತುಪ್ಪಳಕ್ಕಾಗಿ ಜನರು ಇದನ್ನು ನಾಯಿಗಳ ಸಹಾಯದಿಂದ ಬೇಟೆಯಾಡುವುದುಂಟು. ಲೋರಿಸ್ ಟಾರ್ಡಿಗ್ರೇಡಸ್ ಎಂಬ ಶಾಸ್ತ್ರೀಯ ಹೆಸರುಳ್ಳ ಕಾಡುಪಾಪ ಅಥವಾ ಅಡವಿ ಮನುಷ್ಯ ಕರ್ನಾಟಕದಲ್ಲೂ ಕಂಡುಬಂದಿದೆ. ಕೊಡಗುಜಿಲ್ಲೆ ಇದರ ತವರು ಪ್ರದೇಶ. ಇದೂ ಕೂಡ ವೃಕ್ಷವಾಸಿಯೇ. ಒಂದೊಂದೂ ಸುಮಾರು ೨೮೦-೩೪೦ ಗ್ರಾಂ ತೂಗುತ್ತದೆ. ಗಂಡಿಗಿಂತ ಹೆಣ್ಣು ಸ್ವಲ್ಪ ಚಿಕ್ಕದು. ಬಾಹುಗಳು ನೀಳ ಮತ್ತು ತೆಳು, ಬಾಲ ಇಲ್ಲ. ಮೂತಿ ಚೂಪು; ಕಿವಿಗಳು ದೊಡ್ಡವು. ರಾತ್ರಿಯ ವೇಳೆ ಚಟುವಟಿಕೆಯಿಂದಿದ್ದು ಹಗಲಿನಲ್ಲಿ ಎಲೆಯ ಮರೆಯಲ್ಲಿ ವಿಶ್ರಮಿಸಿಕೊಳ್ಳುತ್ತದೆ. ಹಣ್ಣು ಹಂಪಲೇ ಇದರ ಆಹಾರವಾದರೂ ಭೂಮಿಗಿಳಿದಾಗ ಕೀಟ, ಹಲ್ಲಿ, ಕಪ್ಪೆ ಮತ್ತು ಸಣ್ಣ ಸಣ್ಣ ಪಕ್ಷಿಗಳನ್ನು ತಿನ್ನುತ್ತದೆ.

ಒಂದು ಬಗೆಯ ವಿಶಿಷ್ಟ ಮಾಂಸಾಹಾರಿಗಳ ಗಣವಾದ ಕಾರ್ನಿವೊರದ ಪ್ರತಿನಿಧಿಗಳು ಕರ್ನಾಟಕದಲ್ಲಿ ಉಂಟು. ಈ ಗಣದಲ್ಲಿ ಹಲವು ಕುಟುಂಬಗಳಿವೆ. ಅವುಗಳಲ್ಲಿ ಬೆಕ್ಕು, ಹುಲಿ ಮೊದಲಾದುವನ್ನು ಒಳಗೊಂಡ ಫೆಲಿಡೀ ಕುಟುಂಬ ಒಂದು. ದುಂಡು ತಲೆ, ಒಳಕ್ಕೆ ಎಳೆದುಕೊಳ್ಳಬಹುದಾದ ಮೊನೆಯುಗುರು ಅಥವಾ ನಖಗಳು ಈ ಕುಟುಂಬದ ಪ್ರಾಣಿಗಳ ವಿಶೇಷ ಲಕ್ಷಣ. ಬಹು ಹಿಂದೆ ಸಿಂಹಗಳು ದಟ್ಟವಾದ ದಂಡಕಾರಣ್ಯದಲ್ಲಿ ವಾಸಿಸುತ್ತಿದ್ದುವೆಂದೂ ಹೇಳಲಾಗಿದ್ದರೂ ಈಗ ಇವು ಕನ್ನಡನಾಡಿನಲ್ಲಿ ಇಲ್ಲವೇ ಇಲ್ಲ. ಹುಲಿ (ಪ್ಯಾಂತೆರ ಟೈಗ್ರಿಸ್) ಕರ್ನಾಟಕದ ದಟ್ಟವಾದ ಕಾಡುಗಳಲ್ಲಿ ಕಂಡುಬರುತ್ತದೆ. ಇದು ವಾಸಿಸುವ ಕಾಡುಗಳಲ್ಲಿ ಸಾಕಷ್ಟು ಆಹಾರಜೀವಿಗಳು, ಮರಗಳು, ನೆರಳು, ಬಾಯಾರಿಕೆಯನ್ನು ನೀಗುವ ಜಲಾಶಯ ಆವಶ್ಯಕ. ಹುಲಿಯ ಮೈಮೇಲಿನ ರೋಮದ ಬಣ್ಣ ಮೋಹಕ ಹಾಗೂ ಉಜ್ಜ್ವಲ. ಇದೇ ಕುಟುಂಬಕ್ಕೆ ಸೇರಿದ ಚಿರತೆಗಳು (ಪ್ಯಾಂತೆರ ಪಾರ್ಡಸ್) ಗುಡ್ಡಪ್ರದೇಶಗಳಲ್ಲಿ ಹೆಚ್ಚಾಗಿ ದೊರಕುತ್ತಿದ್ದುವಂತೆ. ಇವು ಸಾಮಾನ್ಯವಾಗಿ ಮಾನವನ ನೆಲೆಯ ಸನಿಹದಲ್ಲಿಯೇ ವಾಸಿಸುತ್ತಿದ್ದು ದನ ಕುರಿ ಮೇಕೆ ಮೊದಲಾದ ಸಾಕುಪ್ರಾಣಿಗಳಿಗೆ ಉಪದ್ರವವನ್ನುಂಟು ಮಾಡುತ್ತಿದ್ದುವು. ಮಾನವನ ಬೇಟೆಯಿಂದ ಇವುಗಳ ಸಂಖ್ಯೆ ಸಾಕಷ್ಟು ಕ್ಷೀಣವಾಗಿ ಈಗ ಇವು ವಿರಳವಾಗಿ ಹೋಗಿವೆ. ಇವನ್ನು ಮೃಗಾಲಯಗಳಲ್ಲಿ ಮಾತ್ರ ನೋಡಬಹುದು. ಚಿರತೆ ಬೆಕ್ಕು ಅಥವಾ ಕಾಡುಬೆಕ್ಕು (ಫೆಲಿಸ್ ಬೆಂಗಾಲೆನ್ಸಿಸ್) ಕರ್ನಾಟಕದ ಕಾಡುಗಳಲ್ಲಿ ಕಂಡುಬರುತ್ತದೆ. ಇದರ ಗಾತ್ರ ಸಾಕುಬೆಕ್ಕಿನಷ್ಟು. ಆದರೆ ಕಾಲುಗಳು ಮಾತ್ರ ನೀಳ. ದೇಹದ ರಚನೆಯಂತೂ ಪುಟ್ಟ ಚಿರತೆಯಂತೆಯೇ ಇರುತ್ತದೆ. ದೇಹ ಹಳದಿಬಣ್ಣ. ಫೆಲಿಸ್ ಕೇಯಸ್ ಎಂಬ ಶಾಸ್ತ್ರೀಯ ಹೆಸರನ್ನು ಮಂಟ ಬೆಕ್ಕು ಅಥವಾ ಕಾಡುಬೆಕ್ಕಿಗೆ ಇಡಲಾಗಿದೆ. ಇದೂ ಕೂಡ ಸಾಕು ಬೆಕ್ಕಿಗಿಂತ ದೊಡ್ಡದು. ಇದರ ಬಾಲ ಮಾತ್ರ ಚಿಕ್ಕದು. ಕಾಲುಗಳು ನೀಳ, ಕಣ್ಣುಗಳು ಮಂದಹಸಿರುಬಣ್ಣ. ಕಾಡುಗಳಲ್ಲಿ ವಾಸಿಸಿದರೂ ಕಾಡುಗಳ ಸಮೀಪದಲ್ಲಿರುವ ಹಳ್ಳಿಗಳಿಗೂ ರಾತ್ರಿವೇಳೆ ಬರುವುದುಂಟು. ಬೇಟೆಯ ಚಿರತೆ (ಆಸಿನೋನಿಕ್ಸ್‌ ಜೂಬೇಟಸ್) ಕನ್ನಡನಾಡಿನ ಉತ್ತರದ ಬಯಲಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಒಂದು ಕಾಲಕ್ಕೆ ಇತ್ತು. ಇದರ ಕಾಲುಗಳು ತೆಳು. ಇದು ನಖಗಳನ್ನು ಸಂಪೂರ್ಣವಾಗಿ ಒಳಕ್ಕೆ ಸೆಳೆದುಕೊಳ್ಳಲಾರದು. ವೇಗವಾಗಿ ಓಡುವ ಜಿಂಕೆಗಳನ್ನು ಹಿಂಬಾಲಿಸಿ ಬೇಟೆಯಾಡುವುದು ಇದಕ್ಕೆ ಪ್ರಿಯ. ಮಾನವ ಇವುಗಳ ಉಪದ್ರವವನ್ನು ತಾಳಲಾರದೆ ಇವನ್ನು ಬೇಟೆಯಾಡಿ ಬಯಲಿನಲ್ಲಿ ಸಿಗದಂತೆ ಮಾಡಿದ್ದಾನೆ. ಈಗಲೂ ಆಗಾಗ ಗ್ರಾಮಗಳಿಗೆ ನುಗ್ಗಿ ನಾಯಿ, ಜಾನುವಾರಗಳನ್ನು ಹಿಡಿಯುತ್ತವೆ. ಇವು ಕನ್ನಡ ನಾಡಿನ ಬಯಲಿನಲ್ಲಿ ಸ್ವೇಚ್ಫೆಯಾಗಿ ಸಿಗುತ್ತವೆಯೋ ಇಲ್ಲವೋ ತಿಳಿಯದು. ಇವನ್ನು ಮೃಗಾಲಯಗಳಲ್ಲಂತೂ ನೋಡೇ ನೋಡಬಹುದು.
	
ವೈವೆರಿಡೀ ಕುಟುಂಬಕ್ಕೆ ಸೇರಿದ ಪುನುಗು ಬೆಕ್ಕಿನ (ವೈವಿರಿಕ್ಯುಲ ಇಂಡಿಕ) ವಾಸ ಕಾಡು ಮತ್ತು ಗುಡ್ಡಪ್ರದೇಶಗಳಲ್ಲಿ ಆಗಿದ್ದರೂ ಇದು ಎತ್ತರವಾಗಿ ಬೆಳೆಯುವ ಹುಲ್ಲು ಮೈದಾನದಲ್ಲಿ ಹೇರಳವಾಗಿ ದೊರೆಯುತ್ತದೆ. ಉದ್ದ ಸುಮಾರು ೯೦ ಸೆಂಮೀ. ತೂಕ ಸುಮಾರು ೩-೪ ಕೆ.ಜಿ. ದೇಹ ಬೂದುಬಣ್ಣ. ಬಾಲ ಸ್ವಲ್ಪಮಟ್ಟಿಗೆ ಪಟಪಟ್ಟೆಬಣ್ಣ. ಕೆಲವು ಸಂದರ್ಭಗಳಲ್ಲಿ ಇದನ್ನು ಹಳ್ಳಿಗಳ ಮನೆಗಳಲ್ಲೂ ಚರಂಡಿಗಳಲ್ಲೂ ಕಾಣಲಾಗಿದೆ. ಇದು ಮರವನ್ನು ಹತ್ತಬಲ್ಲದು. ಇಲಿ, ಮೀನು, ಅಳಿಲು ಸಣ್ಣಸಣ್ಣ ಪಕ್ಷಿಗಳು ಇದರ ಆಹಾರ. ವೃಷಣಕೋಶ ಪೂರ್ವಪ್ರದೇಶದಲ್ಲಿರುವ ಸುಗಂಧ ಗ್ರಂಥಿಗಳಿಂದ ಪುನುಗನ್ನು ಉತ್ಪಾದಿಸಿ ಇದು ಮರಗಳಿಗೆ ಒರಸುತ್ತದೆ. ಕೇರ ಬೆಕ್ಕು ಅಥವಾ ಕಬ್ಬೆಕ್ಕು (ಪ್ಯಾರಡಾಕ್ಸ್ಯೂರಸ್ ಹರ್ಮಾಫ್ರೊಡೈಟಸ್) ಇದೇ ಕುಟುಂಬಕ್ಕೆ ಸೇರಿದ್ದು. ಇದು ಕಾಡುಗಳಲ್ಲಿ ಮರಗಳ ಮೇಲೆ ಕೆಲವು ಸಂದರ್ಭಗಳಲ್ಲಿ ಹಳ್ಳಿಗಳ ಹೊರ ವಲಯದಲ್ಲಿರುವ ಮಾವಿನಮರ ಮತ್ತು ಈಚಲು ಮರಗಳ ಮೇಲೂ ವಾಸಿಸುತ್ತದೆ. ಅಲ್ಲದೆ ಮಾನವ ವಾಸಿಸುವ ಮನೆ ಅಥವಾ ಹಳೆಮನೆ ಪಾಳುಬಿದ್ದ ದೇವಸ್ಥಾನ ಮೋರಿ ಚರಂಡಿಗಳಲ್ಲೂ ಕಂಡುಬಂದಿದೆ.

ಎರಡು ಜಾತಿಯ ಕೀರಗಳು (ಮುಂಗುಸಿ) ಕನ್ನಡ ನಾಡಿನಲ್ಲಿ ಇವೆ. ಇವು ಹರ್ಪೆಸ್ಟಿಡೀ ಕುಟುಂಬಕ್ಕೆ ಸೇರಿದವು. ಸಾಮಾನ್ಯವಾಗಿ ತಿಳಿದಿರುವ ಕೀರ (ಹರ್ಪಸ್ಟಿಸ್ó ಎಡ್ವರ್ಸಿ) ೯೦ ಸೆಂಮೀ ಉದ್ದವಿದೆ. ದೇಹದಷ್ಟೇ ಉದ್ದದ ಬಾಲವೂ ಉಂಟು. ಇದರ ತೂಕ ೧.೪ ಕೆಜಿ. ಕಾಡುಗಳು ಇದರ ತವರು ಪ್ರದೇಶವಾದರೂ ಕುರುಚಲು ಕಾಡುಗಳಲ್ಲಿ ಹಾಗೂ ಸಾಗುವಳಿ ಪ್ರದೇಶಗಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ. ಇದು ಬೆಕ್ಕುಗಳಂತೆ ಇಲಿಗಳನ್ನು ಬೇಟೆಯಾಡಿ ತಿನ್ನುತ್ತದೆ. ಅಲ್ಲದೆ ನಾಗರಹಾವು ಮೊದಲಾದ ವಿಷದ ಹಾವುಗಳೊಡನೆ ಹೋರಾಡುವ ಪ್ರವೃತ್ತಿಯೂ ಇದಕ್ಕಿದೆ. ಮತ್ತೊಂದು ಬಗೆಯ ತೀರ ಕೆಂಪುಕೀರ (ಹ.ವಿಟಿಕಾಲಿಸ್) ಇದರ ಕುತ್ತಿಗೆಯ ಬಳಿ ಮತ್ತು ಕುತ್ತಿಗೆಯ ಹಿಂಭಾಗದಲ್ಲಿ ನೀಳವಾದ ಬಾಲವಿದೆ; ಅದು ದೇಹದ ಉದ್ದಕ್ಕಿಂತಲೂ ಕಡಿಮೆ. ಇಲಿ, ಹಾವು, ಚೇಳು, ಕೀಟಗಳೇ ಇದರ ಆಹಾರ. ಪಶ್ಚಿಮಘಟ್ಟದ ಕಾಡು ಪ್ರದೇಶಗಳಲ್ಲಿ ಈ ಕೀರ ಕಂಡುಬರುತ್ತದೆ.

ಕತ್ತೆಕಿರುಬ ಅಥವಾ ನಾಯಿಹುಲಿ ಹೈನಿಡಿ ಕುಟುಂಬದ ಪ್ರತಿನಿಧಿಯಾಗಿ ಬೆಟ್ಟಗುಡ್ಡಗಳ ಗುಹೆಗಳಲ್ಲಿ ಮತ್ತು ಎತ್ತರವಾಗಿ ಬೆಳೆಯುವ ಬಯಲು ಪ್ರದೇಶದಲ್ಲಿ ಸಾಮಾನ್ಯವಾಗಿ ದೊರಕುತ್ತದೆ. ಕಾಡುಪ್ರದೇಶಗಳಲ್ಲಿ ವಿರಳ. ಇದು ಹಗಲಿನಲ್ಲಿ ವಿಶ್ರಾಂತಿ ಪಡೆದು ರಾತ್ರಿಯ ವೇಳೆ ಬೇಟೆಗೆ ಹೊರಡುತ್ತದೆ.

ನಾಯಿಕುಟುಂಬ ಕೇನಿಡೀಗೆ ಸೇರಿದ ಪ್ರಾಣಿಗಳು ತೋಳ (ಕೇನಿಸ್ ಲೂಪುಸ್) ನರಿ ಅಥವಾ ಕುಸ್ಯಾನರಿ (ಕೇನಿಸ್ ಆರಿಯಸ್), ಗುಳ್ಳೇನರಿ ಅಥವಾ ಕೆಂಪುನರಿ (ವುಲ್ಪೆಸ್ ಬೆಂಗಾಲೆನ್ಸಿಸ್) ಮತ್ತು ಸೀಳುನಾಯಿ ಅಥವಾ ಕಾಡುನಾಯಿ (ಕ್ಯೂಆನ್ ಆಲ್ಪೈನಸ್). ತೋಳ ಕಾಡುಗಳಲ್ಲಿ ವಾಸಿಸಿ ಕಾಡಿನ ದನಕರು ಜಿಂಕೆಗಳನ್ನು ತಿಂದು ಜೀವಿಸುತ್ತದೆ. ನರಿ, ಕೆಂಪುನರಿಗಳು ಮಾಂಸಹಾರಿಗಳಾಗಿರುವುದೇ ಅಲ್ಲದೆ ಕಬ್ಬು, ಕಾಫಿ ಮತ್ತು ನೆಲಗಡಲೆ ಫಸಲುಗಳಿಗೆ ಉಪದ್ರವವನ್ನುಂಟುಮಾಡುತ್ತವೆ. ಸೀಳು ನಾಯಿಗಳು ಜಿಂಕೆ ಮೊಲ ಮೊದಲಾದವನ್ನು ಹಿಡಿದು ತಿಂದು ಜೀವಿಸುತ್ತವೆ.

ಕರ್ಣಾಟಕದ ಕರಡಿಗಳು (ಮೆಲರ್ಸಸ್ ಅರ್ಸಿನಸ್) ಕೂಡ ಕಾರ್ನಿವೋರ ಗಣಕ್ಕೆ ಸೇರಿದವು. ಇವು ಮಂಡ್ಯ, ಕೋಲಾರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳ ಬೆಟ್ಟಗುಡ್ಡಗಳ ಗುಹೆಗಳಲ್ಲಿ ವಾಸಿಸುತ್ತವೆ. ಇವು ಕೀಟಗಳನ್ನೇ ಅಲ್ಲದೆ ಹಣ್ಣು ಮತ್ತು ಜೇನುಗೂಡಿನಿಂದ ಪಡೆದ ಜೇನುತುಪ್ಪವನ್ನೂ ತಿನ್ನುತ್ತವೆ. ಇವುಗಳ ಮೈ ಮೇಲೆ ನೀಳವಾದ ಕೂದಲಿವೆ.

ಮುಸ್ಟೆಲ್ಲಿಡೆ ನೀರುನಾಯಿ (ಲುಟ್ರ ಲುಟ್ರ) ಮುರ್ರನಾಯಿ (ಮಾರ್ಟೀಸ್ ಗ್ವಾಲ್ಕಿನ್ಸಿ) ಮೆಲಿವೋರ ಕ್ಯಾಪೆನ್ಸಿಸ್ ಮೊದಲಾದುವುಗಳಿವೆ. ಇವುಗಳ ಮುಖ್ಯ ಆಹಾರ ಮೀನು. ನೀರುನಾಯಿ ಕೊಡಗು ಜಿಲ್ಲೆಯ ಎತ್ತರವಾದ ಶೀತಪ್ರದೇಶದ ನೀರಿನಲ್ಲಿ ವಾಸಿಸುತ್ತದೆ. ದೇಹ ಸ್ವಲ್ಪಮಟ್ಟಿಗೆ ಕಪ್ಪೂ.  ಇದನ್ನು ಹಿಡಿದು ಸುಲಭವಾಗಿ ಸಾಕಬಹುದು. ಇದೇ ಜಾತಿಗೆ ಸೇರಿದ ಮತ್ತೊಂದು ಬಗೆಯ ಕೆಂಚು ನೀರುನಾಯಿ ಲುಟ್ರ ಪರ್ಸಿಸಿಲ್ಲಾಟದ ದೇಹದ ಬಣ್ಣ ಕೆಂಪಾಗಿರುತ್ತದೆ. ಇದು ಕೂಡ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ದೊರಕುತ್ತದೆ. ಮುರ್ರನಾಯಿಯ ಮುಖ ಸ್ವಲ್ಪ ಕಪ್ಪು, ಕುತ್ತಿಗೆಯ ತಳಭಾಗ ಬಿಳುಪು ಮತ್ತು ಹಳದಿ. ದೇಹದ ಹಿಂಭಾಗ ಸ್ವಲ್ಪ ಕಪ್ಪೂ.  ಕೊಡಗಿನ ಬೆಟ್ಟಗುಡ್ಡಗಳಲ್ಲಿ ವಾಸ. ಅಲ್ಲದೆ ಇದು ಮರದಮೇಲೂ ಹತ್ತಿ ಓಡಾಡಬಲ್ಲದು. ನಖಗಳಿಲ್ಲದ ನೀರುನಾಯಿ (ಅಯೋನಿಕ್ಸ್‌ ಸಿನರಿಯ) ಕೊಡಗಿನ ಬೆಟ್ಟಗಳಲ್ಲಿ ಹರಿಯುವ ಸಣ್ಣಸಣ್ಣ ನದಿಗಳಲ್ಲಿ ಕಂಡುಬರುತ್ತದೆ. ತಾರಕರಡಿ (ಮೆಲಿವೋರ ಕ್ಯಾಪೆನ್ಸಿಸ್) ಒಣಮೈದಾನ ಪ್ರದೇಶಗಳಲ್ಲಿ ದೊರಕುತ್ತದೆ. ಕರಡಿಯಂತೆ ಇದರ ಕಾಲು ಮೋಟು ದಪ್ಪ ; ಬಾಲ ಚಿಕ್ಕದು. ಪಾದಗಳು ಅಗಲ. ಪಕ್ಷಿಗಳು, ಜೇನು, ಹಣ್ಣು, ಸರೀಸೃಪಗಳು ಇದರ ಆಹಾರ. ಇದು ಸಾಮಾನ್ಯವಾಗಿ ಹೆಚ್ಚು ಮಳೆ ಬೀಳುವ ಕಾಡುಪ್ರದೇಶದಲ್ಲಿ ಕಂಡುಬರುವುದಿಲ್ಲ.

ಇನ್ಸೆಕ್ಟಿವೊರ ಗಣದ ಪ್ರತಿನಿಧಿಗಳೂ ಕರ್ಣಾಟಕದಲ್ಲಿವೆ. ಇವು ಕೀಟಭಕ್ಷಿಗಳು. ಇವುಗಳಲ್ಲಿ ಮರದ ಮುಳ್ಳಿಲಿ (ಅನತಾನ ಎಲೋಟಿ) ಕಂದು ಮೂಗಿಲಿ (ಪ್ಯಾರ ಎಕೈನಸ್ ಮೈಕ್ರೋಪಸ್) ಮತ್ತು ಸುಂಡಿಲಿಗಳು (ಸಂಕಸ್ ಮ್ಯುರಿನಸ್) ಪ್ರಸಿದ್ಧವಾದವು. ಮರದ ಮುಳ್ಳಿಲಿ ಒಣಪ್ರದೇಶದಲ್ಲಿ ವಾಸಿಸುತ್ತದೆ. ದೇಹ ೧೮-೨೦ ಸೆಂಮೀ. ಉದ್ದ. ಬಾಲ ೨೦-೨೩ ಸೆಂಮೀ. ಕಂದು ಮೂಗಿಲಿಯ ದೇಹದ ಉದ್ದ ೧೫-೧೮ ಸೆಂಮೀ. ಬಾಲ ೨-೫ ಸೆಂಮೀ. ಗೂಟದಂಥ ಮೂಗು ಮೋಟುಬಾಲ ಇದರ ವೈಶಿಷ್ಟ್ಯ. ಇದರ ವಾಸ ಮೈದಾನ ಪ್ರದೇಶ. ಅಪೂರ್ವಕ್ಕೆ ಮನೆಗಳನ್ನೂ ಪ್ರವೇಶಿಸುವುದುಂಟು. ಸುಂಡಿಲಿ ಬಯಲಿನಲ್ಲಿಯೇ ಅಲ್ಲದೆ ಮನೆಗಳಲ್ಲಿಯೂ ವಾಸಿಸುತ್ತದೆ. ದೇಹ ೧೫ ಸೆಂಮೀ. ಬಾಲ ೮ ಸೆಂಮೀ ಉದ್ದ. ಮೂತಿ ನೀಳ ಮತ್ತು ಚೂಪೂ.  ಇದು ಕೀರಲು ಧ್ವನಿ ಮಾಡುತ್ತದೆ.

ಬಾವಲಿಗಳು ಕೈರಾಪ್ಟರ ಗಣಕ್ಕೆ ಸೇರಿದವು. ಬಾವಲಿಯ ಮುಂಗಾಲಿನ ಬೆರಳುಗಳು ಲಂಬವಾಗಿ ಬೆಳೆದು ಜಾಲಪಟಲದಿಂದ ಕೂಡಿರುವುದೇ ಅಲ್ಲದೆ ಈ ಪಟಲ ವಿಶಾಲವಾಗಿದೆ. ಇದು ದೇಹದ ಪಕ್ಕ ಮತ್ತು ಹಿಂಗಾಲುಗಳನ್ನು ಬಂಧಿಸಿ ಹಾರಲು ನೆರವಾಗುವುದು ಒಂದು ವೈಶಿಷ್ಟ್ಯ. ಸಾಮಾನ್ಯವಾಗಿ ಮರಗಳ ಕೊಂಬೆ, ಕೆಲವು ಸಂದರ್ಭಗಳಲ್ಲಿ ದೊಡ್ಡ ದೊಡ್ಡ ಮನೆ ದೇವಾಲಯಗಳ ತೊಲೆಗಳು ಇಲ್ಲೆಲ್ಲ ಜೋಲಾಡುತ್ತಿರುತ್ತವೆ. ಇವು ಸಾಮಾನ್ಯವಾಗಿ ಹಗಲಿನಲ್ಲಿ ಒಂದೆಡೆಯಿದ್ದು ಸಂಜೆಯಾಗುತ್ತಲೇ ತಮ್ಮ ಬೀಡಿನಿಂದ ಹೊರಬಂದು ಚಟುವಟಿಕೆಯಿಂದ ಹಾರಿ ಆಹಾರವನ್ನು ಸಂಪಾದಿಸುತ್ತವೆ. ಇವುಗಳಿಗಿರುವ ಜ್ಞಾನೇಂದ್ರಿಯ ಸೂಕ್ಷ್ಮ ಹಾಗೂ ತೀಕ್ಷ್ಣತಮವಾದದ್ದು. ಕನ್ನಡ ನಾಡಿನಲ್ಲಿ ತೊಗಲ ಬಾವಲಿ (ಟಿರೋಪಸ್ ಎಡ್ವರ್ಸಿ) ಅಗಲಗಿವಿಯ ಬಾವಲಿ (ರೈನೊಲೋಫಸ್) ಹಣ್ಣು ಬಾವಲಿ ಮೊದಲಾದುವು ಇವೆ. ಇವು ಹಣ್ಣುಗಳನ್ನು ತಿನ್ನುವುದರಿಂದ ಬಾಳೆ, ಸೀಬೆ ಮೊದಲಾದ ತೋಟಗಳಿಗೆ ಇವುಗಳ ಉಪದ್ರವ ಹೆಚ್ಚು.

ಅಳಿಲುಗಳ ಗುಂಪಿನ ರೊಡೆಂಶಿಯದ ಪ್ರತಿನಿಧಿಗಳೆಲ್ಲವೂ ಮಾನವನ ದವಸ ಧಾನ್ಯ ಹಣ್ಣು ಹಂಪಲು ಮೊದಲಾದುವನ್ನು ತಿಂದು ನಾಶಪಡಿಸತಕ್ಕವು. ಸಾಮಾನ್ಯವಾಗಿ ಕಂಡುಬರುವ ಅಳಿಲಿಗೆ ಬೆನ್ನಿನ ಮೇಲೆ ಮೂರು ನೀಳವಾದ ಬಿಳಿಯ ಪಟ್ಟೆಗಳಿವೆ. ಈ ಅಳಿಲು (ಫ್ಯುನಾಂಬ್ಯುಲಸ್ ಪಾಮೇರಮ್) ಸಾಗುವಳಿ ಪ್ರದೇಶಗಳಲ್ಲಿಯೇ ಅಲ್ಲದೆ ಇತರ ಬಯಲಿನಲ್ಲೂ ಕಾಡಿನ ಸರಹದ್ದಿನಲ್ಲೂ ಮಾನವನ ವಸತಿಯ ಸನಿಹದಲ್ಲೂ ಕಂಡುಬರುತ್ತದೆ. ಇದರ ಸೋದರ ಅಳಿಲುಗಳು ಉದಾಹರಣೆಗೆ ಪಟ್ಟೆ ಅಳಿಲು (ಫ್ಯು. ರಫ್ಟೋನಿ) ಕೊಡಗು ಜಿಲ್ಲೆ ಮತ್ತು ಹಾಸನಜಿಲ್ಲೆಗಳಲ್ಲಿ ಕಂಡುಬಂದರೆ ಕಾಡು ಅಳಿಲು (ಫ್ಯು. ನ್ಯೂಮೇರಿಯಸ್) ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಕಾಡುಗಳಲ್ಲಿ ಉಂಟು. ಬೂದು ಅಳಿಲು (ಸೈಯೂರಸ್ ಇಂಡಿಕಸ್) ಎಂಬ ದೊಡ್ಡ ಅಳಿಲು ಪಶ್ಚಿಮ ಘಟ್ಟಗಳ ದಟ್ಟಡವಿಗಳಲ್ಲಿ ವಾಸಿಸುತ್ತದೆ. ಬಯಲಿನ ಇಲಿ ಅಥವಾ ಕೋಕ (ನಿಕೋಸಿಯ ಬೆಂಗಾಲೆನ್ಸಿಸ್) ಎಂಬ ಇಲಿ ಬಯಲಿನಲ್ಲಿ ಬಿಲ ತೋಡಿ ಅದರಲ್ಲಿ ವಾಸಿಸುತ್ತದೆ. ಸಾಗುವಳಿ ಪ್ರದೇಶದಲ್ಲಿ ಇದರ ಹಾವಳಿ ಹೆಚ್ಚು. ಹೆಗ್ಗಣ (ಸೆಸೋಸಿಯ ಬ್ಯಾಂಡಿಕೋಟ) ಇದು ಬಿಲಗಳಲ್ಲಿ ವಾಸಿಸಿ ಕಣಜಗಳಿಗೆ ದಾಳಿ ಇಡುತ್ತದೆ. ಮನೆಯಿಲಿ (ಮಸ್ ಡೆಕುಮಾನಸ್), ಮನೆ ಬುರ್ಗಿಲಿ (ಮಸ್ ಮಸ್ಕುಲಸ್) ಮತ್ತು ಕರಿಯಿಲಿ (ಮಸ್ ರ್ಯಾಟ್ಟಸ್) ಮಾನವನ ವಸತಿಗೃಹಗಳಲ್ಲಿಯೇ ಕಂಡುಬರುತ್ತದೆ. ಧಾನ್ಯದವಸಗಳಿಗೆ ಇವುಗಳ ಹಾವಳಿ ಹೆಚ್ಚು. ಬೂದಿಬಣ್ಣದ ಕೌಲಿಲಿ (ಮಸ್ ಪ್ಲಾಟಿತ್ರಿಕ್ಸ್‌), ಕೆರೆಯಿಲಿ (ಮಸ್ ಮೆಟ್ಟಾಡ) ಸಹ ಉಂಟು. ಇವುಗಳಿಂದಲೂ ಸಾಗುವಳಿಗೆ ತೊಂದರೆ ಇದೆ. ಮರದ ಇಲಿಗೆ (ಮಸ್ ಓಲೆರೇಸಿಯಸ್) ಉದ್ದವಾದ ಬಾಲವಿದೆ. ಮುಳ್ಳುಹಂದಿ (ಹಿಸ್ಟ್ರಿಕ್ಸ್‌ ಲ್ಯೂಕೂರ) ಪಶ್ಚಿಮ ಘಟ್ಟದ ಕಾಡುಗಳಲ್ಲಿ ಇದೆ. ಇದು ಕಾಫಿ ಮತ್ತು ಕಬ್ಬಿನ ತೋಟಗಳಿಗೆ ನುಗ್ಗಿ ಹಾವಳಿ ಮಾಡುವುದುಂಟು. ಕರ್ಣಾಟಕದ ಕಾಡುಗಳಲ್ಲಿ ಎರಡು ಬಗೆಯ ಮೊಲಗಳು ಮುಖ್ಯವಾದವು. ಒಂದು, ಮೊಲ (ಲೀಪಸ್ ರುಫಿಕಾಡೇಟಸ್), ಇನ್ನೊಂದು ಕರಿ ಕಂಠದ ಮೊಲ (ಲೀ. ನೈಗ್ರಿ ಕಾಲಿಸ್).

ಕರ್ನಾಟಕದ ಪಶ್ಚಿಮಘಟ್ಟದ ಕಾಡುಗಳಲ್ಲಿ ಸ್ವೇಚ್ಛೆಯಾಗಿ ಜೀವಿಸುವ ಅತ್ಯಂತ ದೊಡ್ಡ ಪ್ರಾಣಿಯೆಂದರೆ ಆನೆ (ಎಲಿಫಾಸ್ ಮಾಕ್ಸಿಮಸ್). ಇದು ಅಂಗ್ಯುಲೇಟ ಗಣದಲ್ಲಿರುವ ಪ್ರೋಬಾಸಿಡೀ ಎಂಬ ಉಪಗಣಕ್ಕೆ ಸೇರಿದ್ದು. ಇದರ ಬೀಡು ಸಾಮಾನ್ಯವಾಗಿ ಶಿವಮೊಗ್ಗ ಜಿಲ್ಲೆಯಿಂದ ಹಿಡಿದು ಮೈಸೂರು ಜಿಲ್ಲೆಯವರೆಗೂ ಇದೆ.

ಮೆಲುಕುಹಾಕುವ ಎರಡು ಗೊರಸುಗಳುಳ್ಳ ಹಸು, ಕುರಿ, ಮೇಕೆ, ಜಿಂಕೆ ಮೊದಲಾದ ಪ್ರಾಣಿಗಳು ಅಂಗ್ಯುಲೇಟ ಗಣ ಆರ್ಟಿಯೋಡ್ಯಾಕ್ಟೈಲ ಉಪಗಣಕ್ಕೆ ಸೇರಿವೆ. ದನಕರುಗಳನ್ನು (ಬಾಸ್ ಇಂಡಿಕಸ್) ಪುರಾತನ ಕಾಲದಿಂದಲೂ ಪಳಗಿಸಿ ಬೇಸಾಯಕ್ಕೆ ಉಪಯೋಗಿಸುವುದೇ ಅಲ್ಲದೆ ಹಾಲುಮೊಸರುಗಳಿಗಾಗಿಯೂ ಸಾಕುತ್ತಾರೆ. ಕುರಿ (ಓವಿಸ್) ಮತ್ತು ಆಡುಗಳನ್ನು ಮುಖ್ಯವಾಗಿ ಮಾಂಸಕ್ಕಾಗಿ ಸಾಕುತ್ತಾರೆ. ಬೈಬಾಸ್ ಗೌರುಸ್ ಎಂಬ ವೈಜ್ಞಾನಿಕ ಹೆಸರು ಇರುವ ಕಾಡೆಮ್ಮೆ ಪಶ್ಚಿಮಘಟ್ಟದ ಕಾಡುಗಳಲ್ಲಿ ಮಂದೆಗೂಡಿ ವಾಸಿಸುತ್ತವೆ. ಕಾಡಿನಲ್ಲಿ ಸ್ವೇಚ್ಛೆಯಾಗಿ ಜೀವಿಸುವ ಕಾಡೆಮ್ಮೆಗಳು ಸ್ವಭಾವತಃ ದರ್ಪ ಗಾಂಭೀರ್ಯಗಳಿಂದ ಕೂಡಿದವು. ಸುಮಾರು ೬೫-೭೦ ಸೆಂಮೀ ಎತ್ತರ ೭೮-೯೦ ಸೆಂಮೀ ಉದ್ದ ಬೆಳೆಯುತ್ತದೆ. ಇದರೊಡನೆ ಒಳನಾಡಿದ ಸಾಕು ಎಮ್ಮೆಗಳು ಗಬ್ಬವಾಗಿರುವುದು ತಿಳಿದುಬಂದಿದೆ. ಕೊಳ್ಳೆಗಾಲದ ಕಾಡುಗಳಲ್ಲಿ ಕಾಡು ಆಡು ಅಥವಾ ಬುರ್ರೆ ಆಡುಗಳು (ಹೆಮಿತಟ್ರೇಗಸ್ ಹೈಲೋಕ್ರಸ್) ೪,೦೦೦’ ಎತ್ತರ ಪ್ರದೇಶಗಳಲ್ಲಿ ವಾಸಿಸುತ್ತವೆ.

ಚಿಗರೆ, ಹುಲ್ಲೆಕರ, ಜಿಂಕೆ, ಸಾರಂಗ, ಮೊದಲಾದ ಪ್ರಾಣಿಗಳು ಸರ್ವಿಡೀ ಕುಟುಂಬಕ್ಕೆ ಸೇರಿದವು. ಈ ಕುಟುಂಬದ ಜೀವಿಗಳ ಕೊಂಬು ಟೊಳ್ಳಾಗಿರದೆ ಗಟ್ಟಿಯಾಗಿರುತ್ತದೆ. ಕೊಂಡ ಕುರಿಗಳು (ಟ್ರ್ಯಾ ಸೆರಸ್ ಕ್ವಾರ್ಡಿಕಾರ್ನಿಸ್) ಕನ್ನಡನಾಡಿನ ದಕ್ಷಿಣ ತೀರದ ಪಶ್ಚಿಮಘಟ್ಟಗಳಲ್ಲಿ ವಾಸಿಸುತ್ತವೆ. ಹೆಣ್ಣುಜೀವಿಗಳಿಗೆ ಕೊಂಬುಗಳಿರುವುದಿಲ್ಲ. ಆದರೆ ಗಂಡುಗಳಿಗೆ ಎರಡು ಜೊತೆ ಕೊಂಬುಗಳಿವೆ. ಮುಂದಿನ ಜೊತೆಯ ಕೊಂಬುಗಳು ಹಿಂದಿನ ಜೊತೆಗಿಂತ ಚಿಕ್ಕವು. ಭಾರತದ ಚಿಗರಿಗಳು ಗಜೆ಼ಲ್ ಬೆನೆಟಿ ಉತ್ತರ ಕರ್ನಾಟಕದ ಬಯಲು ಸೀಮೆಯ ಒಣಪ್ರದೇಶದ ಕುರುಚಲು ಕಾಡುಗಳಲ್ಲಿ ವಾಸಿಸುತ್ತವೆ. ಇವು ಆಡುಗಾತ್ರದ ಸುಂದರ ಪ್ರಾಣಿಗಳು. ಇವುಗಳ ಕುತ್ತಿಗೆ ನೀಳ ಮತ್ತು ಸಣ್ಣ ; ಕಣ್ಣುಗಳು ದೊಡ್ಡವು ಮತ್ತು ಸುಂದರವಾದವು ; ಮೈಗೂದಲು ನಯ ಮತ್ತು ಬಾಲ ಮೋಟು. ಹೆಣ್ಣುಗಳಿಗೆ ಸಾಮಾನ್ಯವಾಗಿ ಕೊಂಬುಗಳು ಲೋಪ. ಆದರೆ ಕೆಲವಕ್ಕೆ ನೀಳವಾದ ಅರ್ಧ ಚಂದ್ರಾಕಾರವಾಗಿ ಬೆನ್ನಿನ ಭಾಗಕ್ಕೆ ಬಾಗಿದ ಕೊಂಬುಗಳ ಮೇಲೆ ಬುಡದಿಂದ ತುದಿಯವರೆಗೂ ವೃತ್ತಾಕಾರದ ದಿಬ್ಬಗಳಿರುತ್ತವೆ. ಹುಲ್ಲೆಕರಗಳು (ಆಂಟಿಲೋಪ್ ಸರ್ವಿಕಾಪ್ರ) ಕನ್ನಡ ನಾಡಿನ ಕಾಡಿನಲ್ಲಿ ಕಂಡು ಬರುತ್ತವೆ. ಇವಕ್ಕೆ ೩೫ ಸೆಂಮೀ ಎತ್ತರ ಬೆಳೆಯುವ ಕೊಂಬುಗಳಿವೆ. ಹಲವಾರು ಸುತ್ತುವರಿದ ದಿಬ್ಬಗಳಿಂದ ಕೂಡಿದ ಕೊಂಬುಗಳು ನೆಟ್ಟಗಿರದೆ ಸ್ವಲ್ಪ ಸ್ವಲ್ಪ ವಂಕಿ ವಂಕಿಯಾಗಿರುತ್ತವೆ. ಕೊಂಬುಗಳು ಗಂಡು ಹೆಣ್ಣುಗಳೆರಡರಲ್ಲೂ ಕಂಡುಬರುತ್ತವೆ. ಸಾಂಬಾರ್ ಅಥವಾ ಕಡವೆಗಳು (ಸರ್ವಸ್ ಯಾನಿಕಲರ್) ಜಿಂಕೆಯ ಜಾತಿಗಳಲ್ಲೆಲ್ಲ ದೊಡ್ಡವು. ಸುಮಾರು ೬೫-೭೦ ಸೆಂಮೀ ಎತ್ತರ. ಮೈಗೂದಲು ಒರಟು. ಇದಕ್ಕೆ ಕುತ್ತಿಗೆಯ ಬಳಿ ನೀಳವಾದ ಕೂದಲಿದೆ. ಇವು ಕಾಡಿನ ಪ್ರಾಣಿಗಳು. ಸಾರಂಗ ಅಥವಾ ಚಿತ್ರಾಂಗ ಜಿಂಕೆಗಳು (ಆಕ್ಸಿಸ್ ಆಕ್ಸಿಸ್) ಕನ್ನಡ ನಾಡಿನ ಪಶ್ಚಿಮಘಟ್ಟದ ಕಾಡುಗಳಲ್ಲಿ ಮಂದೆಮಂದೆಯಾಗಿ ವಾಸಿಸುತ್ತದೆ. ಈ ಬಗೆಯ ಜಿಂಕೆಗಳು ಇತರ ಜಿಂಕೆಗಳಿಗಿಂತ ಚಿಕ್ಕವು. ಬೊಗಳುವ ಜಿಂಕೆಗಳೂ (ಮಂಟೈಯಕಸ್ ಮಂಟ್ಜಾಕ್) ನಮ್ಮ ನಾಡಿನ ಕಾಡುಗಳಲ್ಲಿ ದೊರಕುತ್ತವೆ. ಇವು ನಾಯಿ ಬೊಗಳಿದಂತೆಯೇ ಶಬ್ದ ಮಾಡುತ್ತವೆ. ಒಂದು ಕವಲಿನಿಂದ ಕೂಡಿದ ಕೊಂಬು ಮೋಟು. ಬಾಲವೂ ಮೋಟು. 

ಕರ್ನಾಟಕದ ಕಾಡುಹಂದಿ (ಸಸ್ ಕ್ರಿಸ್ಟೇಟಸ್) ಕಾಡುಗಳಲ್ಲಿ ಒಂಟೊಂಟಿಯಾಗಿ ಜೀವಿಸುತ್ತದೆ. ಇದರ ಮೇಲುದವಡೆಯ ಮೇಲೆ ಕೋರೆ ಹಲ್ಲುಗಳು ಕಮಾನಿನಂತೆ ಮೇಲ್ಮುಖನಾಗಿ ಬಾಗಿ ಬಾಯಿಯಿಂದ ಹೊರಚಾಚಿರುತ್ತವೆ. ಅಲ್ಲದೆ ಇವುಗಳ ಕೋರೆಹಲ್ಲುಗಳು ಚಿರಕಾಲ ಬೆಳೆಯತಕ್ಕವು. ಕೋರೆಹಲ್ಲುಗಳ ಸಹಾಯದಿಂದ ಗೆಡ್ಡೆಗೆಣಸುಗಳನ್ನು ಅಗೆದು ತಿನ್ನುತ್ತವೆ. ಇವುಗಳಿಗೆ ನಾಲ್ಕು ಬೆರಳುಗಳಿದ್ದರೂ ನಡೆಯುವಾಗ ಎರಡು ಮಾತ್ರ ಭೂಮಿಯನ್ನು ಮುಟ್ಟುತ್ತವೆ.

ಬರ್ಕ ಅಥವಾ ಕೂರಂದಿ (ಟ್ರ್ಯಾಗ್ಯುಲಸ್ ಮೆಮಿನ್ನ) ಕನ್ನಡನಾಡಿನ ಪಶ್ಚಿಮಘಟ್ಟದ ಕಾಡುಗಳಲ್ಲಿ ಇದೆ. ಇದರ ಎತ್ತರ ಸುಮಾರು ೧೩ ಸೆಂಮೀ. ಜಿಂಕೆಯಂಥ ಈ ಪ್ರಾಣಿಗಳ ದೇಹದ ರಚನೆ ಜಿಂಕೆ ಮತ್ತು ಹಂದಿಗಳ ರಚನೆಯ ಮಧ್ಯವರ್ತಿಯಾಗಿದೆ.

ಫಾಲಿಡೋಟ ವರ್ಗದ ಪ್ರತಿನಿಧಿಯಾಗಿ ಕರ್ಣಾಟಕದಲ್ಲಿ ಚಿಪ್ಪು ಹಂದಿ (ಮೇನಿಸ್ ಕ್ರಾಸಿಕಾಡೇಟ) ದೊರಕುತ್ತದೆ. ಇದಕ್ಕೆ ಮೈಮೇಲೆಲ್ಲ ಹಂಚಿನಂತೆ ಅಳವಡಿಸಿರುವ ಅಗಲವಾದ ಹುರುಪುಗಳಿವೆ. ಕಾಲುಗಳು ಮೋಟು. ಐದು ಬೆರಳುಗಳಿವೆ. ಮೂತಿ ಉದ್ದ ಮತ್ತು ಚೂಪೂ.  ಮುಂಗಾಲಿನ ಬೆರಳುಗಳಿಗೆ ಬಲಯುತವಾದ ನಖಗಳಿವೆ. ಹಲ್ಲು ಲೋಪ. ಇರುವೆ, ಗೆದ್ದಲು ಮೊದಲಾದ ಕೀಟಗಳೇ ಇದರ ಆಹಾರ. ನಿಶಾಚರಿಯಾದ ಈ ಪ್ರಾಣಿ ಬಿಲತೋಡಿ ಜೀವಿಸುತ್ತದೆ. ಅಪಾಯಸನ್ನಿಹಿತವಾದರೆ ದೇಹವನ್ನು ಚೆಂಡಿನಂತೆ ಮುದುರಿಕೊಂಡು ಆತ್ಮರಕ್ಷಣೆಮಾಡಿಕೊಳ್ಳುತ್ತದೆ.

ಕರ್ನಾಟಕದ ಪಕ್ಷಿಗಳೆಲ್ಲವೂ ಹಾರುವ ಗುಂಪಿಗೆ ಸೇರಿದವು. ಇಲ್ಲಿಯೇ ವಾಸಿಸುವ ಪಕ್ಷಿಗಳಿದ್ದರೂ ಇತರ ನೆರೆಹೊರೆಯ ರಾಜ್ಯಗಳಿಗೆ ವಲಸೆ ಹೋಗುವ ಪಕ್ಷಿಗಳೂ ಇವೆ. ಅಲ್ಲದೆ ಹೊರದೇಶದಿಂದ (ಆಘ್ಫಾನಿಸ್ತಾನ, ಸೈಬೀರಿಯ ಇತ್ಯಾದಿ) ಬರುವ ಪಕ್ಷಿಗಳಿವೆ. ಭಾರತದ ರಾಷ್ಟ್ರಪಕ್ಷಿಯೆಂದು ಪರಿಗಣಿಸಲಾಗಿರುವ ನವಿಲು (ಫಾರ್ಮೀವೋ ಕ್ರಿಸ್ಟೇಟಸ್) ಗಾಲಿಪೇಸ್ ಕುಟುಂಬದ ಪ್ರತಿನಿಧಿ. ಇದು ಕರ್ನಾಟಕದ ಕಾಡುಗಳಲ್ಲಿ ಸಾಮಾನ್ಯವಾಗಿ ನೀರಿರುವ ಕಡೆಗಳಲ್ಲಿ ಕಂಡುಬರುತ್ತದೆ. ಹೆಣ್ಣಿಗಿಂತಲೂ ಗಂಡು ಆಕರ್ಷಕವಾದ ಜೀವಿ. ಗಂಡು ತನ್ನ ಬಾಲದ ಮೋಹಕ ಹಾಗೂ ನೀಳವಾದ ರೆಕ್ಕೆಗಳನ್ನು ನೆಟ್ಟಗೆಮಾಡಿ ನರ್ತನ ಮಾಡುವುದು ಒಂದು ವೈಶಿಷ್ಟ್ಯ. ನವಿಲಿಗೆ ಹೆಚ್ಚು ಹಾರಲು ಆಗದಿದ್ದರೂ ಮರದಿಂದ ಮರಕ್ಕೆ ಹಾರಬಲ್ಲದು. ಕೆಲವು ಹಳ್ಳಿಗಳಲ್ಲಿ ಇದನ್ನು ಪಳಗಿಸಿ ಸಾಕುವುದೂ ಉಂಟು.
ಸಾಕು ಕೋಳಿಗಳಿಗೆ ಪೂರ್ವಜರೆನ್ನಿಸಿಕೊಂಡಿರುವ ಭಾರತದ ಕಾಡು ಕೋಳಿ (ಗ್ಯಾಲಸ್ ಗ್ಯಾಲಸ್) ಕರ್ನಾಟಕದ ಕಾಡುಗಳಲ್ಲಿಯೂ ದೊರಕುತ್ತದೆ. ಇದರ ವಾಸ ಸಾಮಾನ್ಯವಾಗಿ ಕುರುಚಲುಗಿಡಗಳು ಮತ್ತು ಬಿದಿರು ಮೆಳೆಗಳಲ್ಲಿ. ಇದೇ ಗುಂಪಿಗೆ ಸೇರಿದ ಕೆಂಗುಚ್ಚದ ಕೋಳಿ (ಗ್ಯಾಲೋಪೆರ್ಡಿಕ್ಸ್‌ ಸ್ಪೆಂಡಿಸೆನ್ಸ್‌) ಮತ್ತು ಕಂದು ಕಾಡುಕೋಳಿ (ಗ್ಯಾಲ್ಸ ಸೊನೆರಾಟಿ) ಕಾಡುಗಳಲ್ಲಿ ಕಂಡುಬರುತ್ತದೆ. ಇದರ ವಾಸ ಸಾಮಾನ್ಯವಾಗಿ ಕಾಡಿನ ಪೊದರು. ಸಾಗುವಳಿ ಪ್ರದೇಶಕ್ಕೆ ಲಾವಕ್ಕಿಗಳು ಚಳಿಗಾಲದಲ್ಲಿ ಭೇಟಿಕೊಡುತ್ತವೆ. ಈ ಗುಂಪಿನಲ್ಲಿ ಹಲವು ಬಗೆಯ ಲಾವಕ್ಕಿಗಳನ್ನು ಕರ್ನಾಟಕದಲ್ಲಿ ಕಾಣಬಹುದು. ಕಪ್ಪೆದೆಯ ಲಾವಕ್ಕಿ ಸಾಮಾನ್ಯವಾಗಿ ಹುಲುಸಾದ ಹುಲ್ಲುಗಾವಲುಗಳಲ್ಲಿ ಹಾಗೂ ಸಾಗುವಳಿ ಪ್ರದೇಶದ ಸನಿಹದಲ್ಲಿ ಕಂಡುಬರುತ್ತದೆ. ಪೊದರು ಲಾವಕ್ಕಿಗಳು ತೆರೆದ ಕಾಡುಪ್ರದೇಶಗಳಲ್ಲಿ ಮಂದೆಗೂಡಿ ಜೀವಿಸುತ್ತವೆ. ಬಿಳಿ ಎದೆಯ ನೀರಕ್ಕಿ (ಆಮೋರಾರ್ನಿಸ್ ಫೋನಿಕ್ಯೂರಸ್) ಕೆರೆ ಕಾಲುವೆಗಳ ದಂಡೆಗಳಲ್ಲಿ ದಟ್ಟವಾಗಿ ಬೆಳೆವ ಜೊಂಡುಗಳ ನಡುವೆ ವಾಸಿಸುತ್ತದೆ.

ಪಾರಿವಾಳ ಮತ್ತು ಕಪೋತಗಳು ತೆಳು ಹಾಗೂ ಹೆಚ್ಚು ಬಲಯುತವಲ್ಲದ ಕೊಕ್ಕುಗಳನ್ನುಳ್ಳವು. ಕಾಳುಕಡ್ಡಿ ಹಣ್ಣುಗಳೇ ಇವುಗಳ ಆಧಾರ. ಇದು ಕೊಲಂಬಿ ಫಾರ್ಮೀಸ್ ಗಣಕ್ಕೆ ಸೇರಿದವು. ಪಾರಿವಾಳ (ಕೊಲಂಬ ಲೀವಿಯ) ಸಾಮಾನ್ಯವಾಗಿ ಮನೆ ಮಠ ಮತ್ತು ಮರಗಳ ಮೇಲೆ ವಾಸಿಸುತ್ತದೆ. ಇದನ್ನು ಕೆಲವರು ಮನೆಗಳಲ್ಲಿ ಸಾಕುವುದೂ ಉಂಟು. ದಪ್ಪಕೊಕ್ಕು, ದೊಡ್ಡ ದೇಹದ ಹಸಿರು ಪಾರಿವಾಳ (ಕ್ರೋಕೋಪಸ್ ಫೀನಿಕಾಪ್ಟಿರಿಕ್ಸ್‌) ಕಾಡುಗಳ ಮರಗಳ ಮೇಲೆಯೇ ವಾಸಿಸುತ್ತದೆ. ಇವುಗಳ ಕಾಲುಗಳು ಭೂಮಿಯ ಮೇಲೆ ಓಡಾಡಲು ಪರಿಪೂರ್ಣತೆ ಪಡೆದಿಲ್ಲ. ಬಿಳಿಯ ಚಿಕ್ಕೆಗಳಿಂದ ಕೂಡಿದ ಬೂದುಬಣ್ಣದ ಕಪೋತಗಳು ಸಾಮಾನ್ಯವಾಗಿ ಬಯಲು ಪ್ರದೇಶದ ವಾಸಿಗಳು. ಇವು ಸಾಮಾನ್ಯವಾಗಿ ಸಾಗುವಳಿ ಪ್ರದೇಶಗಳಲ್ಲಿ ಆಗಾಗ್ಗೆ ಒಂಟೊಂಟಿಯಾಗಿ ಅಥವಾ ಗುಂಪು ಗುಂಪಾಗಿ ಕಂಡುಬರುವುದೂ ಉಂಟು.

ಮುಂಜಾನೆ ಕಾಕಾ ಎಂದು ಕೂಗಿ ಬೆಳಗಾಗುವುದನ್ನು ಸೂಚಿಸುವ ಕಾಗೆಗಳು ಕರ್ನಾಟಕದಲ್ಲೂ ಇವೆ. ಊರುಕಾಗೆ (ಕಾರ್ವಸ್ ಸ್ಪ್ಲೆಂಡಿಯನ್ಸ್‌) ಮತ್ತು ಕಾಡುಕಾಗೆ (ಕಾ. ಮ್ಯಾಕ್ರೋರಿಂಕಸ್) ಎಂಬ ಎರಡು ಬಗೆಗಳ ಕಾಗೆಗಳಿವೆ. ಕಾಡುಕಾಗೆಗಳು ಸಾಮಾನ್ಯವಾಗಿ ಕಾಡು ಮರಗಳ ಮೇಲೆ ಕಂಡುಬಂದರೂ ಆಗಾಗ್ಗೆ ಕಾಡುಗಳ ಸಮೀಪದಲ್ಲಿರುವ ಹಳ್ಳಿ ಊರುಗಳಲ್ಲೂ ಕಂಡುಬರುತ್ತವೆ. ಎರಡು ಬಗೆಯ ಕಾಗೆಗಳ ದೇಹಗಳೂ ಕಪ್ಪೂ.  ಆದರೆ ಊರುಕಾಗೆಯ ಕಂಠ ಬೂದುಬಣ್ಣದ್ದಾಗಿದ್ದರೆ ಕಾಡುಕಾಗೆಗೆ ಅದು ಸಹ ಕಪ್ಪಾಗಿರುತ್ತದೆ.

ಕವಿಗಳ ಗಮನವನ್ನು ಅನಾದಿ ಕಾಲದಿಂದಲೂ ಸೆಳೆದಿರುವ ಭಾರತದ ಕೋಗಿಲೆಗಳು (ಯುಡೈನಮಿಸ್ ಸ್ಕೋಲೋಪೇಸೆಯಸ್) ಕರ್ನಾಟಕದ ಕಾಡು ತೋಟಗಳಲ್ಲಿಯೂ ಇವೆ. ಗಂಡು ಅಚ್ಚಕಪ್ಪು, ಹೆಣ್ಣುಪಕ್ಷಿ ಸ್ವಲ್ಪಮಟ್ಟಿಗೆ ಕಂದು ಬಣ್ಣ, ರೆಕ್ಕೆ, ಎದೆ ಹೊಟ್ಟೆಯ ಭಾಗಗಳಲ್ಲಿ ಬಿಳಿಯ ಚುಕ್ಕೆಗಳಿವೆ. ಇವು ಸಾಮಾನ್ಯವಾಗಿ ಕಾಗೆಗಳ ಗೂಡುಗಳಲ್ಲಿ ಮೊಟ್ಟೆಗಳನ್ನಿಟ್ಟು ಕಾಗೆಗಳ ಸಹಾಯದಿಂದ ತಮ್ಮ ಮೊಟ್ಟೆಗಳಿಗೆ ಕಾವು ಕೊಡಿಸುತ್ತವೆ. ಅಲ್ಲದೆ ಒಮ್ಮೊಮ್ಮೆ ಆ ಗೂಡಿನಲ್ಲಿ ಕಾಗೆಗಳ ಮೊಟ್ಟೆಗಳಿದ್ದರೆ ಅವನ್ನು ನಾಶಪಡಿಸುವುದೂ ಉಂಟು. ಸಾಕುತಾಯಿ ಕಾಗೆ ಆ ಮೊಟ್ಟೆಗಳನ್ನು ತನ್ನ ಮೊಟ್ಟೆಗಳೇ ಎಂದು ಭ್ರಮಿಸಿ ಕಾವುಕೊಟ್ಟು ಮರಿಗಳು ಮೊಟ್ಟೆಯಿಂದ ಹೊರಬಂದಮೇಲೆ ಗುಟುಕುಕೊಟ್ಟು ಸಾಕುತ್ತದೆ. ದೊಡ್ಡದಾಗಿ ಬೆಳೆದ ಮರಿಗಳು ಕೋಗಿಲೆಯ ಮರಿಗಳೆಂದು ತಿಳಿದಮೇಲೆ ಅದು ಅವನ್ನು ಓಡಿಸಿಬಿಡುತ್ತದೆ. ಈ ಕೋಗಿಲೆಗಳಿಗೆ ಸಂಬಂಧಿಸಿದಂತೆ ನಾಲ್ಕೈದು ಬಗೆಯ ಕೋಗಿಲೆ ಜೀವಪ್ರಭೇದಗಳು ಇಲ್ಲಿಯ ಕಾಡಿನಲ್ಲೂ ಇವೆ.

ಕರ್ನಾಟಕದ ಕಾಡು, ತೋಪು, ತೋಟಗಳಲ್ಲಿ ಹಲವು ಬಗೆಯ ಗಿಳಿಗಳು ಇವೆ. ಇವೆಲ್ಲ ಪ್ಸಿಟ್ಟಾಸಿ ಫಾರ್ಮಿಸ್ ಗಣಕ್ಕೆ ಸೇರಿದವು. ಸಾಮಾನ್ಯವಾಗಿ ಕಾಣಬರುವ ಹಸಿರು ಗಿಳಿ (ಸಿಟ್ಟಾಕುಲ ಕ್ರಾಮೇರಿ) ನಾಡಿನಾದ್ಯಾಂತ ಉಂಟು. ಪ್ಸಿ, ಯೂಪಾತ್ರ ಜಾತಿಯ ದೊಡ್ಡ ಗಿಳಿ ಕಾಡುಗಳಿಗೆ ಸೀಮಿತವಾಗಿದೆ. ಇದು ಗೂಡು ಕಟ್ಟಲಾರದು. ಮರದ ಪೊಟರೆಗಳಲ್ಲಿ ಒಂದೆರಡು ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತದೆ.
ಗೂಬೆಗಳು ನಿಶಾಚರ ಪಕ್ಷಿಗಳು. ಇವು ಸ್ಟ್ರಿಂಜೀಫಾರ್ಮಿಸ್ ಗಣಕ್ಕೆ ಸೇರಿದವು. ರಾತ್ರಿ ವೇಳೆಯಲ್ಲಿ ಪುಟ್ಟ ಅಳಿಲು ಇಲಿ ಮುಂತಾದವನ್ನು ಹಿಡಿದು ಜೀವಿಸುತ್ತವೆ. ಇವುಗಳ ತಲೆ ದೊಡ್ಡದು. ಕಣ್ಣುಗಳು ಸಹ ದೊಡ್ಡವಾಗಿದ್ದು ಮುಮ್ಮುಖವಾಗಿ ಅಳವಡಿಕೆಗೊಂಡಿರುತ್ತವೆ. ಕೊಕ್ಕು ಚಿಕ್ಕದು. ಕೊಕ್ಕೆಯಂತೆ ಬಾಗಿದೆ. ಪಾಳುಮನೆ, ಸಮಾಧಿ, ಮಂಟಪಗಳೇ ಇವುಗಳ ವಾಸ. ಮರದ ಕೊಂಬೆಗಳ ಮೇಲೆ ಕೂರುವ ಸೌಕರ್ಯವಿದೆ. ಅಥೇನಿ ಬ್ರಾಮ (ಚುಕ್ಕಿ ಗೂಬೆ) ಮತ್ತು ಸ್ಟ್ರಿಕ್ಸ್‌ ಆಸೆಲೇಟಂ (ಮರದ ಮಚ್ಚೆಗೂಬೆ) ಅಲ್ಲದೆ ಇತರ ಗೂಬೆಯ ಭೇದಗಳೂ ಕರ್ನಾಟಕದಲ್ಲಿವೆ.

ಮಾಂಸಭಕ್ಷಿಗಳಾದ ಗರುಡ, ಡೇಗೆ, ಗಿಡುಗ, ಹದ್ದು, ರಣಹದ್ದುಗಳು ಫಾಲ್ಕನಿ ಫಾರ್ಮಿಸ್ ಅಥವಾ ಆಕ್ಸಿಪಿಟ್ರೆಸ್ ಗಣಕ್ಕೆ ಸೇರಿದವು. ಇವುಗಳ ಕೊಕ್ಕು ಚಿಕ್ಕವು, ಹರಿತವಾದವು, ಬಲಯುತವಾದವು. ಕಾಲುಬೆರಳುಗಳಲ್ಲಿರುವ ನಖಗಳೂ ಬಲಯುತವಾದವು. ತಮ್ಮ ಆಹಾರ ಜೀವಿಯನ್ನು ಹಿಡಿದುಕೊಳ್ಳುವುದರಲ್ಲಿ ಮತ್ತು ಹರಿದು ಚಿಂದಿ ಮಾಡುವುದರಲ್ಲಿ ನೆರವಾಗತಕ್ಕವು. ಇವುಗಳ ಆಹಾರ ಇತರ ಸಣ್ಣಸಣ್ಣ ಪಕ್ಷಿಗಳು ಅಥವಾ ಸಸ್ತನಿಗಳು. ರಣಹದ್ದುಗಳ ಕುತ್ತಿಗೆ ಮತ್ತು ತಲೆ ಬೋಳಾಗಿವೆ. ಇವು ಸಾಮಾನ್ಯವಾಗಿ ಸತ್ತಪ್ರಾಣಿಗಳ ಮಾಂಸವನ್ನು ಭಕ್ಷಿಸುತ್ತವೆ. ಇವು ದೊಡ್ಡ ದೊಡ್ಡ ಮರಗಳ ಮೇಲೆ ಬೆಟ್ಟಗಳ ಶಿಖರಗಳ ಮೇಲೆ ವಾಸಿಸುವುದು ಸಾಮಾನ್ಯ. ಗರುಡಪಕ್ಷಿ ಕನ್ನಡ ನಾಡಿನಾದ್ಯಂತ ಉಂಟು.

ಆನ್ಸೆರಿಫಾರ್ಮಿಸ್ ಗಣಕ್ಕೆ ಸೇರಿದ ಬಾತುಕೋಳಿಗಳು ಕರ್ನಾಟಕದ ಜಲಾಶಯಗಳಲ್ಲಿ ಇವೆ. ಇವುಗಳ ಕೊಕ್ಕು ಅಗಲವಾಗಿರುವುದರಿಂದ ಇವು ಮೀನುಗಳನ್ನು ಸುಲಭವಾಗಿ ಹಿಡಿಯಬಲ್ಲವು. ಒಂದು ಜಾತಿಯ ಬಾತುಕೋಳಿಯನ್ನು ಹಳ್ಳಿಗಳಲ್ಲಿ ಸಾಕುವುದೂ ಉಂಟು. ಇದರ ಮೊಟ್ಟೆ ಮನುಷ್ಯನ ಆಹಾರವೂ ಹೌದು. ಕೆಲವು ಬಗೆಯ ಬಾತುಕೋಳಿಗಳು ಈಜುವುದೇ ಅಲ್ಲದೆ ನೀರಿನಲ್ಲಿ ಮುಳುಗಿ ಮೀನುಗಳನ್ನು ಹಿಡಿಯಬಲ್ಲವು ಮತ್ತು ಒಂದೆಡೆಯಿಂದ ಮತ್ತೊಂದೆಡೆಗೆ ಹಾರಲೂ ಬಲ್ಲವು. ನಟ್ಕ ಅಥವಾ ಹೆಣೆಗೆ ಬಾತು (ಸಾರ್ಕಿಡಿ ಯಾರ್ನಿಸ್ ಮೆಲನೋಟಸ್) ಮಲೆನಾಡಿನ ಜಲಾಶಯಗಳಲ್ಲಿ ಸಾಮಾನ್ಯವಾಗಿ ಇರುವ ಪಕ್ಷಿ. ಥೀಲ್ ಅಥವಾ ಅರಳೆಬಾತು (ನೆಟ್ಟೋಪಸ್) ಕೂಡ ನಾಡಿನಾದ್ಯಂತ ದೊರಕುವ ಪಕ್ಷಿ. ಕೆಲವು ಜಾತಿಯ ಬಾತುಕೋಳಿಗಳು ಕನ್ನಡನಾಡಿಗೆ ಉತ್ತರದಿಂದ ಚಳಿಗಾಲದಲ್ಲಿ ವಲಸೆ ಬರುವುದು ಉಂಟು.

ಕಬ್ಬಾರೆ, ಕೊಕ್ಕರೆ, ಕ್ರೌಂಚಪಕ್ಷಿ, ನಾರಾಯಣಿಪಕ್ಷಿ ಮೊದಲಾದವು ಜಲಾಶಯದಲ್ಲಿ ಅಥವಾ ಅದರ ಬಳಿ ವಾಸಿಸತಕ್ಕ ಪಕ್ಷಿಗಳು. ಇವು ಸಿಕೋನಿಫಾರ್ಮಿಸ್ ಗಣಕ್ಕೆ ಸೇರಿದವು. ಇವಕ್ಕೆ ಹಾರುವ ಶಕ್ತಿ ಅಗಾಧ. ಕಾಲುಗಳು, ಕಾಲು ಬೆರಳುಗಳು ಕೊಕ್ಕು ಮತ್ತು ಕುತ್ತಿಗೆ ಎಲ್ಲವೂ ಉದ್ದ. ಅನೇಕವು ವಲಸೆಗಾರ ಪಕ್ಷಿಗಳು. ಆರ್ಡೇಯ ಸಿನೇರೆಯ ಎಂಬ ಜಾತಿಯ ಕ್ರೌಂಚಪಕ್ಷಿ ನಮ್ಮ ನಾಡಿನ ಹಲವಾರು ಕಡೆ ಇದೆ. ಇದರ ಮುಖ್ಯ ಆಹಾರ ಮೀನು. ಕಬ್ಬಾರೆ ಪಕ್ಷಿಗಳು ಒಂಟೊಂಟಿಯಾಗಿ ಕೊಳ, ನದಿ, ಕೆರೆಗಳ ಬಳಿ ವಾಸಿಸುತ್ತವೆ. ಒಮ್ಮೊಮ್ಮೆ ನೀರಿನಲ್ಲಿ ಅಲುಗಾಡದೆ ನಿಂತಿರುತ್ತವೆ. ಬುಬುಲ್ಕಸ್ ಐಬಿಸ್ ಎಂಬ ಕ್ರೌಂಚಪಕ್ಷಿ ಸಾಮಾನ್ಯವಾಗಿ ದನಗಳ ಹಿಂಡಿನ ಮಧ್ಯೆ ಇರುತ್ತದೆ. ಇದು ದನಕರುಗಳ ಮೈಮೇಲಿನ ಉಣ್ಣಿಗಳನ್ನು ಹಿಡಿದು ತಿನ್ನುವುದನ್ನು ಕಾಣಬಹುದು. ಆರ್ಡೆಯೋಲ ಗ್ರೇಯಿ ಜಾತಿಯ ಕಬ್ಬಾರೆ ಬತ್ತದ ಗದ್ದೆಗಳಲ್ಲಿ ಇರುವುವು. ಅನಸ್ಟೋಮಸ್ ಜಾತಿಯ ಕಬ್ಬಾರೆಯನ್ನು ಜೌಗುಪ್ರದೇಶಗಳಲ್ಲಿ ಅದರ ಅಗಲವಾದ ಕೊಕ್ಕಿನ ಸಹಾಯದಿಂದಲೇ ಗುರುತಿಸಬಹುದು. ಪ್ಲಾಟೇಲಿಯ ಲ್ಯೂಕೋರೋಡಿಯ ಎಂಬ ಕೊಕ್ಕರೆ ಈ ರಾಜ್ಯದಲ್ಲಿದೆ. ಕ್ಸೀನೋರಿಂಕಸ್ ಏಷಿಯಾಟಿಕಸ್ ಎಂಬ ಜಾತಿಯ ಕರಿಕುತ್ತಿಗೆಯ ಕೊಕ್ಕರೆಗಳು ಆಗಾಗ್ಗೆ ನದಿ ಕೆರೆಗಳ ಬಳಿ ಕಾಣುವುದುಂಟು. ಪೋಡಿಸಿಪಿಫಾರ್ಮೀಸ್ ಗಣದ ಪ್ರತಿನಿಧಿಗಳು ಕರ್ಣಾಟಕದಲ್ಲಿವೆ. ಪೋಡಿಸಿಪೆಸ್ ರುಫಿಕಾಲಿಸ್ ಎಂಬ ಜಾತಿಯ ಜಲಚರ ಪಕ್ಷಿ ಈ ರಾಜ್ಯದಲ್ಲಿ ದೊರಕುವ ಅತ್ಯಂತ ಚಿಕ್ಕಪಕ್ಷಿ. ನೀರ್ಗಾಲಿಕ್ಕುವ ಕೆಲವು ಪಕ್ಷಿಗಳು ಕರಾಡ್ರಿಫಾರ್ಮೀಸ್ ಗಣಕ್ಕೆ ಸೇರಿದವು. ಇವು ನೀರಿನಲ್ಲಿ ಎತ್ತುಗಾಲಿಕ್ಕಿ ನಡೆಯುವುದೇ ಅಲ್ಲದೆ ಹಾರಬಲ್ಲವು. ಹೈಡ್ರೊಫೇಸಿಯಾನಸ್ ಚಿರುರ್ಗಸ್ ಕೊಳ, ಕೆರೆ, ಮೊದಲಾದ ಜೌಗು ಪ್ರದೇಶಗಳಲ್ಲಿ ಕಂಡುಬರುವ ಪಕ್ಷಿ. ಲೋಬೋಪ್ಲುವಿಯ ಮಲಬಾರಿಗ ಎಂಬ ಹಳದಿ ಬಣ್ಣದ ದೇವನಹಕ್ಕಿಗೆ ತೆರೆದ ಒಣಮೈದಾನ ಪ್ರದೇಶವೇ ವಾಸ. ಟ್ರಿಂಗ ಜಾತಿಯ ಪಕ್ಷಿ ಯೂರೋಪ್ ಉತ್ತರ ಏಷ್ಯಾದಲ್ಲಿ ಸಂತಾನೋತ್ಪತ್ತಿ ಮಾಡಿ ನಮ್ಮ ದೇಶಕ್ಕೂ ವಲಸೆ ಬರುವ ಪಕ್ಷಿ. ಕ್ಯಾಪೆಲ್ಲ ಜಾತಿಯ ಉಲ್ಲಂಗಿಪಕ್ಷಿ ಕಾಶ್ಮೀರದಲ್ಲಿ ತನ್ನ ಸಂತಾನವನ್ನು ಬೆಳೆಸಿ ನಮ್ಮ ನಾಡಿಗೆ ಚಳಿಗಾಲದಲ್ಲಿ ವಲಸೆ ಬರುವ ಪಕ್ಷಿ. ಇದರಲ್ಲಿ ಎರಡು ಪ್ರಭೇದಗಳು ಮುಖ್ಯವಾದವು. ಒಂದು ಕ್ಯಾ. ಗಾಲಿನಾಗೊ ಮತ್ತು ಕ್ಯಾ. ಸ್ಪೆನೂರ. ಸ್ಕೋಲೋಪಾಕ್ಸ್‌ ರಸ್ಟಿಕೋಲ ಎಂಬ ಜಾತಿಯ ಕಾಡುಕೋಳಿಯೂ ಪಶ್ಚಿಮ ಘಟ್ಟಗಳಿಗೆ ವಲಸೆಬರುವ ಪಕ್ಷಿ.

ಕೋರಾಸಿಫಾರ್ಮೀಸ್ ಗಣದ ಪ್ರತಿನಿಧಿಗಳೂ ಇಲ್ಲಿವೆ. ಈ ಬಗೆಯ ಪಕ್ಷಿಗಳಿಗೆ ಮೂರು ಕಾಲುಬೆರಳುಗಳು ಸಾಮಾನ್ಯವಾಗಿ ಒಟ್ಟಿಗೆ ಕೂಡಿರುವುದು ಒಂದು ವೈಶಿಷ್ಟ್ಯ. ಉರುಳಕ್ಕಿ (ಕೋರಾಸಿಯಸ್ ಇಂಡಿಕ) ಉಜ್ಜ್ವಲ ಬಣ್ಣಗಳಿಂದ ಕೂಡಿದೆ. ಬೇಸಾಯ ಪ್ರದೇಶವೇ ಇದರ ವಾಸ. ಕೀಟ ಮೊದಲಾದವೇ ಇದರ ಆಹಾರ. ಜೇನು ಮುಕ್ಕ (ಮೆರಾಪ್ಸ್‌ ಓರಿಯಂಟ್ಯಾಲಿಸ್) ಸಾಮಾನ್ಯವಾಗಿ ಮಾನವನ ವಸತಿಗಳ ಸನಿಹದಲ್ಲಿ ವಾಸಿಸುತ್ತದೆ. ಇದರ ಆಹಾರ ಜೇನುನೊಣಗಳು, ಕಣಜ ಮತ್ತು ಇತರ ಕೀಟಗಳು. ಡೈಕೋಸಿರಾಸ್ ಬೈಕಾರ್ನಿ ಜಾತಿಯ ಪಕ್ಷಿಗಳು ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಕಂಡುಬರುತ್ತವೆ.
ಕರ್ನಾಟಕದ ಪಾಲಕೀ ಹಕ್ಕಿಗಳಿಗೆ (ಸ್ಯಾಂಡ್ಗ್ರೌಸಸ್) ಹಾರುವ ಶಕ್ತಿ ಹೆಚ್ಚಾಗಿದೆ. ಇವನ್ನು ಸಾಮಾನ್ಯವಾಗಿ ಬಯಲು ಸೀಮೆಯ ಕುರುಚಲು ಕಾಡುಗಳಲ್ಲಿ ಕಾಣಬಹುದು. ಕೆಲವು ವಲಸೆಗಾರ ಪ್ರವೃತ್ತಿಯುಳ್ಳವು. ಇವುಗಳ ಆಹಾರ ದವಸಧಾನ್ಯ, ಸಂಜೆ ಮತ್ತು ಬೆಳಗಿನ ಹೊತ್ತು ಮಂದೆಮಂದೆಯಾಗಿ ಸಾಗುವಳಿ ಪ್ರದೇಶಕ್ಕೆ ನುಗ್ಗಿ ದಾಳಿಮಾಡುವುದೂ ಉಂಟು. ಟಿರೋಕ್ಲೆಸ್ ಇಂಡಿಕಸ್ ಮತ್ತು ಟಿ.ಎಕ್ಸುಟಸ್ ಎಂಬವು ಮುಖ್ಯವಾದುವು. ಗುಬ್ಬಚ್ಚಿ (ಪ್ಯಾಸರ್ ಡೊಮೆಸ್ಟಿಕಸ್) ಫ್ರಿಂಜಿಲ್ಲಿಡೀ ಕುಟುಂಬಕ್ಕೆ ಸೇರಿದ ಪಕ್ಷಿ. ಇದರ ಕೊಕ್ಕು ದಪ್ಪ ಶಂಖಾಕೃತಿ. ಕಾಳಿನ ಸಿಪ್ಪೆ ಸುಲಭವಾಗಿ ಬಿಡಿಸಿ ತಿನ್ನುವ ವೈಶಿಷ್ಟ್ಯ ಇದರದ್ದು. ಮಾನವನ ವಸತಿಯ ಆಸುಪಾಸುಗಳಲ್ಲಿ ಇದರ ಬೀಡು. ಕಳ್ಳಿಪಿಟಕ ಅಥವಾ ದಾಸರಿ ಹಕ್ಕಿಗಳಲ್ಲಿ (ವ್ಯಾಗ್ಟೈಲ್) ಕೆಲವು ಪ್ರಭೇದಗಳನ್ನು ಕನ್ನಡ ನಾಡಿನಲ್ಲೂ ಕಾಣಬಹುದು. ಇವುಗಳ ಕೊಕ್ಕು ತೆಳು ಮತ್ತು ನೀಳ. ಬಾಲ ನೀಳ. ಮೋಟಸಿಲ್ಲ ಕೈನೀರಿಯ ಬಯಲು ಪ್ರದೇಶ ಮತ್ತು ವಸತಿಗೃಹಗಳ ಬಳಿ ಕಂಡು ಬರುತ್ತದೆ. ಸಾಗುವಳಿ ಬೆಳೆಗಳು, ಕಾಳುಕಡ್ಡಿಗಳೇ ಇದರ ಆಹಾರ. ಆಂತಸ್ ರುಪುಲಸ್ ಎಂಬ ದಾಸರಿಹಕ್ಕಿಯೂ ಮೊಟಸಿಲ್ಲದಂತೆಯೇ ಜೀವನ ಸಾಗಿಸುತ್ತದೆ ಶಿಖೆಯ ಟಿಟ್ಟಿಭಪಕ್ಷಿ (ಕ್ರೆಸ್ಟೆಡ್ ಲಾರ್ಕ್) ದಾಸರಿಹಕ್ಕಿಯಂತೆಯೇ ಇರುತ್ತದೆ. ಆದರೆ ಬಾಲ ಸ್ವಲ್ಪ ಮೋಟು. ಇದರ ವೈಜ್ಞಾನಿಕ ಹೆಸರು ಗಲೇರಿಟ ಕ್ರಿಸ್ಟೇಟ. ಇದು ಮುಗಿಲಿನಲ್ಲಿ ಹಾರುವಾಗ ಸಿಳ್ಳು ಹಾಕುವುದು ಒಂದು ವೈಶಿಷ್ಟ್ಯ. ಬೂದು ಕಿರೀಟದ ಟಿಟ್ಟಿಭ ಪಕ್ಷಿಗಳು ಸಾಗುವಳಿ ಪ್ರದೇಶಗಳಲ್ಲಿ ಕಂಡುಬರುತ್ತದೆ. ಕದಿರುಗಣಿಗಳ ಕೊಕ್ಕು ನೀಳ, ಚೂಪು ಅಲ್ಲದೆ ಸ್ವಲ್ಪ ಕಮಾನಿನಂತೆ ಬಾಗಿರುತ್ತದೆ. ಇವು ಸಾಮಾನ್ಯವಾಗಿ ಒಂಟೊಂಟಿ ಅಥವಾ ಎರಡೆರಡಾಗಿರುವ ಗುಂಪಿನಲ್ಲಿ ಕಂಡುಬರುತ್ತವೆ. ಕಾಡು ತೋಪುಗಳಲ್ಲಿ ಇವು ಸಾಮಾನ್ಯ. ಇವು ಕೀಟಗಳನ್ನು ತಿನ್ನವುದೇ ಅಲ್ಲದೆ ಹೂವಿನ ಮಕರಂದವನ್ನು ಹೀರಲು ಆಸೆಪಡುತ್ತವೆ. ಭಾರತದ ಪಿಟ್ಟ (ಪಿಟ್ಟ ಬ್ರಾಕಿಯೂರ) ಕುರುಚಲುಗಿಡಗಳ ಕಾಡಿನಲ್ಲಿ ವಾಸಿಸುತ್ತದೆ. ಕೀಟ ಮತ್ತು ಅವುಗಳ ಮೊಟ್ಟೆಗಳೇ ಇವುಗಳ ಮುಖ್ಯ ಆಹಾರ.
ಪಿಸಿಡೀ ಕುಟುಂಬಕ್ಕೆ ಸೇರಿದ ಮರಕಟುಕ ಹಕ್ಕಿಗಳು ಕರ್ನಾಟಕದಾದ್ಯಂತ ಇವೆ. ಸಾಮಾನ್ಯವಾಗಿ ಕುರುಚಲು ಗಿಡಗಳ ಕಾಡುಗಳಿಗಿಂತ ದೊಡ್ಡ ಕಾಡುಗಳೇ ಇವಕ್ಕೆ ಪ್ರಿಯ. ಹೂಪೋ ಪಕ್ಷಿಗೆ (ಯೂಪ್ಯುಪ) ತೆಲಯ ಮೇಲೆ ಒಂದು ಶಿಖೆಯಿದೆ. ಇದು ಮರವನ್ನು ಕುಟುಕಿ ಗೂಡುಮಾಡುವುದಿಲ್ಲ ; ಬದಲು ಮೊದಲೇ ಇರುವ ಗೂಡು, ಪೊಟರೆಗಳಲ್ಲಿ ವಾಸಿಸುತ್ತದೆ. ತಲೆಯ ಮೇಲಿರುವ ಶಿಖೆ ಬೀಸಣಿಗೆಯಂತೆ ಮುಚ್ಚಿಕೊಳ್ಳುವಂತಿದೆ. ತೋಟದ ಹೊಲಗಳಲ್ಲಿ ಬೆಳೆ ತೆನೆಗಳಿಂದ ಕೂಡಿದ ಕಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ಹಕ್ಕಿಗಳು ಮೈನಾಗಳು (ಪ್ಯಾಸ್ಟರ್ ರೈಸಿಯಸ್). ಕಂದು ತಲೆಯ ಮೈನ (ಸ್ಟರ್ನಿಯ ಮಲಬಾರಿಕ) ತೆರೆದ ಕಾಡು ಪ್ರದೇಶಗಳಲ್ಲಿ ಇದೆ. ಆಕ್ರಿಡೋ ತೆರಿಸ್ ಟ್ರಿಸ್ಟಿಸ್ ಜಾತಿಯ ಮೈನಾ ಹಕ್ಕಿಗಳು ನಮ್ಮ ನಾಡಿನಾದ್ಯಂತ ದೊರಕುವ ಪಕ್ಷಿಗಳು. ಇವನ್ನು ಪಳಗಿಸಿ ಮಾತು ಕಲಿಸಬಹುದು. ಗೀಜಗನ ಹಕ್ಕಿಗಳು ಸಾಗುವಳಿ ಪ್ರದೇಶಗಳಲ್ಲಿ ಕಂಡುಬರುತ್ತವೆ. ಈ ಬಗೆಯ ಹಕ್ಕಿಗಳಲ್ಲಿ ನಾಲ್ಕೈದು ಪ್ರಭೇದಗಳನ್ನು ಗುರುತಿಸಬಹುದು. ನಮ್ಮ ನಾಡಿನ ಕುರುಚಲು ಗಿಡದ ಕಾಡುಗಳಲ್ಲಿ ಕೆಲವು ಬಾರಿ ದರ್ಜಿ ಹಕ್ಕಿಗಳ ಪರಿಚಯವಾಗುತ್ತವೆ. ಇವು ಎಲೆಗಳನ್ನು ಹೊಲೆದು ಗೂಡುಕಟ್ಟುವ ಕುಶಲತೆಯನ್ನು ಕಲಿತಿವೆ. ಕನ್ನಡನಾಡಿನ ಪಕ್ಷಿ ಸಂಪತ್ತು ಇನ್ನೂ ವಿಪುಲವಾಗಿದೆ. ಆದರೆ ಇಲ್ಲಿನ ಕೆಲವು ಪಕ್ಷಿಗಳಿಗೆ ಸಾಮಾನ್ಯ ಹೆಸರುಗಳ ಅಭಾವವಿದೆ. ಪಕ್ಷಿಗಳ ದೇಹರಚನೆ, ಜೀವನ ವಿಶೇಷತೆ, ಅವುಗಳ ವಲಸೆಗಾರಿ ಪ್ರವೃತ್ತಿ ಮೊದಲಾದವುಗಳ ಅಧ್ಯಯನಕ್ಕೆ ಇಲ್ಲಿ ಹೆಚ್ಚು ಅವಕಾಶವಿದೆ.

ಕನ್ನಡನಾಡಿನ ದೊಡ್ಡ ಸರೀಸೃಪ ಮೊಸಳೆ ಎಂದು ಹೇಳಬಹುದು (ಕ್ರಾಕೊಡೈಲಸ್ ಪಾಲುಸ್ಟ್ರಿಸ್). ಇದು ನದಿ ಕೆರೆಗಳಲ್ಲಿ ವಾಸಿಸುತ್ತದೆ. ಇದರ ಕಾಲು ಬೆರಳುಗಳು ಚೀಲ ಪಾದಗಳಿಂದ ಕೂಡಿದೆ. ಸಮುದ್ರವನ್ನು ಸೇರುವ ನದಿ ಮುಖಜ ಪ್ರದೇಶಗಳಲ್ಲಿ ಜೀವಿಸುವ ಮೊಸಳೆ ಕ್ರಾಪೋರೋಸಸ್. ಇವೇ ಕ್ರಾಕೊಡೀಲಿಯ ಗಣದ ಪ್ರತಿನಿಧಿಗಳು. ಲಾಸೆಟೀಲಿಯ ಉಪಗಣದ ಪ್ರತಿನಿಧಿಗಳು ಸುಮಾರಾಗಿ ಕಂಡುಬರುತ್ತವೆ. ಮನೆಗಳಲ್ಲಿ ವಾಸಿಸುವ ಹಲ್ಲಿಯ (ಹೆಮಿಡ್ಯಾಕ್ಟ್ಯೆಲಸ್ ಬ್ರೂಕಿ) ಕಾಲಿನ ಬೆರಳುಗಳಲ್ಲಿ ನಖಗಳಿವೆ. ಪಾದಗಳು ಗೋಡೆ ಗಾಜುಗಳ ಮೇಲೆ ಓಡಾಡಲು ಅನುಕೂಲವಾಗಿವೆ. ತೆರೆದ ಕಾಡುಗಳಲ್ಲಿ, ಬೇಲಿ, ಮೆಳೆಗಳಲ್ಲಿ ಮೈದಾನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಲಾಸೆಟೀಲಿಯ ಎಂದರೆ ಹೆಂಟೆಗೊದ್ದ (ಕ್ಯಾಲೋಟಿಸ್ ವರ್ಸಿಕೋಲಾರ್) ದಕ್ಷಿಣ ಕನ್ನಡ ಜಿಲ್ಲೆಯ ದಕ್ಷಿಣ ಕಾಡುಗಳಲ್ಲಿ ಕ್ಯಾಲೋಟಿಸ್ ಎಲ್ಲಿಯೋಟಿ ಪ್ರಭೇದದ ಹೆಂಟೆಗೊದ್ದಗಳು ದೊರಕುತ್ತವೆ. ಕೊಳ್ಳೆಗಾಲ ತಾಲ್ಲೂಕಿನಲ್ಲಿ ಸಾಲಿಯ ಹಾರ್ಸಿ ಫೀಲ್ಡೀ ಜಾತಿಯ ಹೆಂಟೆಗೊದ್ದ ಉಂಟು. ಕರ್ಣಾಟಕದ ಬಯಲು ನಾಡಿನ ಗುಡ್ಡ ಪ್ರದೇಶಗಳಲ್ಲಿ ಪ್ಯಾಮೋಮಿಲಸ್ ಡಾರ್ಸಾಲಿಸ್ ಎಂಬ ಬಗೆಯ ದೊಡ್ಡಹಲ್ಲಿ (ಬಂಡೆಹಲ್ಲಿ) ಸಿಗುತ್ತದೆ. ಬಣ್ಣ ಬದಲಾಯಿಸಿಕೊಳ್ಳುವ ಗೋಸುಂಬೆ (ಕ್ಯಾಮೆಲಿಯಾನ್ ಜಿûಲ್ಯಾನಿಕಸ್) ಕಾಡುಗಳ ಮರಗಳ ಮೇಲೆ ವಾಸಿಸುತ್ತದೆ. ಹಾವುರಾಣಿಗಳಲ್ಲಿ ನಾಲ್ಕು ಜೀವಜಾತಿಗೆ ಸೇರಿದವು ನಮ್ಮ ನಾಡಿನಲ್ಲಿವೆ. ಮಬೂಯ-ಇದು ಬಯಲು, ಬೇಲಿಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಲೈಗೊಸೋಮ ಸೆಪೊಫಸ್ ಮತ್ತು ರಿಸ್ಟೆಲ್ಲ-ಇವು ಇತರ ಹಾವುರಾಣಿ ಸಂಬಂಧಿಗಳು. ಉಡ (ವೆರಾನಸ್ ಮಾನಿಟರ್) ಬಯಲು ಮೈದಾನ ಪ್ರದೇಶ ಮತ್ತು ಕಾಡುಗಳಲ್ಲಿ ವಾಸಿಸುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ದಕ್ಷಿಣದ ಕಾಡುಗಳಲ್ಲಿ ಹಾರುವ ಹಲ್ಲಿ (ಡ್ರಾಕೋ ಡಸ್ಸಿಮಿಯೆರಿ) ಕಂಡು ಬಂದಿದೆ.

ಕಿಲೋನಿಯದ ಪ್ರತಿನಿಧಿಗಳೇ ಆಮೆಗಳು. ಇವು ನದಿ, ಕಾಲುವೆ, ಕೆರೆಗಳಲ್ಲಿ ವಾಸಿಸುತ್ತವೆ. ಹಾಗೂ ಕೆಲವು ಬಗೆಗಳು ಭೂಮಿಯ ಮೇಲೂ ಜೀವಿಸುತ್ತವೆ ಮತ್ತೆ ಕೆಲವಕ್ಕೆ ಸಾಗರಗಳೇ ತವರು ಪ್ರದೇಶ. ಮಲೆನಾಡಿನ ಬೆಟ್ಟಗುಡ್ಡಗಳಲ್ಲಿ ಜೀವಿಸುವ ನೆಲದ ಆಮೆ ಟೆಸ್ಟುಡೋ ಎಲೆಗಾನ್ಸ್‌. ನದಿ ಮತ್ತು ಜೌಗು ಪ್ರದೇಶದಲ್ಲಿ ವಾಸಿಸತಕ್ಕ ನೀರಾಮೆಗಳು ಟ್ರೈಯೋನಿಕ್ಸ್‌ ಲೆಯಿತಿ ಪ್ರಭೇದಕ್ಕೆ ಸೇರಿದವು. ಇವುಗಳ ಚಿಪ್ಪನ್ನು ಮೃದು ಚರ್ಮ ಮುಚ್ಚಿರುತ್ತದೆ. ಕಾಲುಬೆರಳುಗಳು ಪ್ರತ್ಯೇಕವಾಗಿರುತ್ತವೆ. ನದಿ ಕಾಲುವೆಗಳಲ್ಲಿ ವಾಸಿಸುವ ನೀರಾಮೆಗಳು ಜಿಯೋಮೈಡ ಟ್ರೈಜುಗ ಜಾತಿಗೆ ಸೇರಿವೆ. ಇವುಗಳ ಕಾಲುಬೆರಳುಗಳ ಮಧ್ಯೆ ಜಲಪಾದಗಳಿವೆ. ಚಿಪ್ಪನ್ನು ಕೊಂಬಿನ ಫಲಕಗಳು ಮುಚ್ಚಿವೆ. ಇವು ತಮ್ಮ ತಲೆಯನ್ನು ಸಂಪೂರ್ಣವಾಗಿ ಚಿಪ್ಪಿನ ಒಳಭಾಗಕ್ಕೆ ಎಳೆದುಕೊಳ್ಳಬಲ್ಲವು.

ಕನ್ನಡ ನಾಡಿನಲ್ಲಿ ಹಾವುಗಳಿಗೆ ಬರವಿಲ್ಲ-ವಿಷರಹಿತ ಮತ್ತು ವಿಷಪುರಿತ ಹಾವುಗಳೆರಡೂ ಇವೆ. ವಿಷರಹಿತ ಹಾವುಗಳಲ್ಲಿ ಟಿಫ್ಲಾಪ್ಸ್‌ ಬ್ರಾಮಿನಸ್ ಎಂಬುದು ಅತ್ಯಂತ ಚಿಕ್ಕ ಹಾವು. ಇದು ಬೆಂಗಳೂರು ಜಿಲ್ಲೆಯಲ್ಲಿ ಕಂಡುಬರುತ್ತದೆ. ೧೭-೧೮ ಸೆಂಮೀ ಉದ್ದ ಬೆಳೆಯುತ್ತದೆ. ಹೆಬ್ಬಾವು ಅಥವಾ ದಾಸರಹಾವು (ಪೈಥಾನ್ ಮಾಲ್ಯುರಸ್) ಕನ್ನಡ ನಾಡಿನಲ್ಲಿ ಅತ್ಯಂತ ದೊಡ್ಡದಾಗಿ ಬೆಳೆಯುವ ಹಾವು, ತೇವಮಯವಾದ ಬಂಡೆಗಳಿಂದ ಕೂಡಿದ ಮೈದಾನ ಪ್ರದೇಶಗಳಲ್ಲಿ ಇದು ಗರಿಷ್ಠ ೭೦೦ ಸೆಂಮೀ ಉದ್ದ ಬೆಳೆಯಬಹುದು. ನೇತ್ರಗೊಡ್ಡಿ ಹಾವು (ಎರಿಕ್ಸ್‌ ಕೋನಿಕಸ್) ಕರ್ಣಾಟಕದಾದ್ಯಂತ ಕಂಡುಬರುವ ಹಾವು. ಬೂದಿಮಿಶ್ರಿತ ಪಾಟಲ ವರ್ಣದ ಮೈಮೇಲೆ ದೊಡ್ಡ ದೊಡ್ಡ ಕಂದುಬಣ್ಣದ ಮಚ್ಚೆಗಳಿಂದ ಇದನ್ನು ಗುರುತಿಸಬಹುದು. ಕಣ್ಣುಗಳು ಬಲು ಚಿಕ್ಕವು. ಸಾಮಾನ್ಯವಾಗಿ ಮರಳು ತುಂಬಿದ ಭೂಪ್ರದೇಶದಲ್ಲಿ ಸ್ವಲ್ಪಮಟ್ಟಿಗೆ ಹುದುಗಿರುತ್ತದೆ. ಬಾಲ ಮೋಟು, ಯೂರೋಪಿಲ್ಟಿಡೀ ಕುಟುಂಬಕ್ಕೆ ಸೇರಿದ ಮೆಲನೋಫೀಡಿಯಂ ಜಾತಿಯ ಎರಡು ಪ್ರಭೇದಗಳು ಕೊಡಗು ಜಿಲ್ಲೆಯಲ್ಲಿ ಸಿಗುತ್ತವೆ. ಪ್ಲೆಕ್ಟುರಸ್ ಕನಾರಿಕಸ್, ಯೂರೋಪಿಲ್ಟಿಡ್ ಓಸೆಲ್ಲೆಟಸ್, ಯೂ. ಆಕಿರ್ಟ್‌ಸೆಪ್ಸ್‌, ಯೂ. ರೂಬ್ರೊಲೀನಿಯೇಟಸ್, ಯೂ. ಫಿಪ್ಸೋನಿ, ಯೂ. ಮೈಹೇಂದ್ರೆ, ಯೂ. ಮ್ಯಾಕುಲೇಟಸ್ ಜಾತಿಯ ಹಾವುಗಳು ನಮ್ಮ ಪಶ್ಚಿಮಘಟ್ಟದ ಕಾಡುಗಳಲ್ಲಿ ಇವೆ.

ಕೊಲಂಬ್ರಿಡೀ ಕುಟುಂಬದ ಕೇರೆ ಹಾವು (ಟಿಯಸ್ ಮೂಕೋಸಸ್) ಕರ್ನಾಟಕದಾದ್ಯಂತ ಉಂಟು. ಇದು ಮರವನ್ನು ಸ್ವಲ್ಪ ಹತ್ತಬಲ್ಲುದು. ಆಗಾಗ್ಯೆ ಕಪ್ಪೆ ಇಲಿಗಳನ್ನು ತಿನ್ನಲು ಕಣಜಗಳನ್ನು ಹೊಗುವುದುಂಟು. ಈ ಹಾವು ನಾಗರಹಾವಿನೊಡನೆ ಸಂಭೋಗ ಬೆಳೆಸಿ ಸಂತಾನೋತ್ಪತ್ತಿ ಮಾಡುತ್ತದೆಯೆಂಬ ನಂಬಿಕೆಗೆ ಯಾವ ಸಾಕ್ಷ್ಯಾಧಾರಗಳೂ ಇಲ್ಲ. ಪಟ್ಟೆ ಹಾವು ಓಲಿಗೊಡಾನ್ ವೆನೂಸ್ಟಸ್ ಪಶ್ಚಿಮಘಟ್ಟಗಳಲ್ಲಿಯೇ ಅಲ್ಲದೆ ಮಲೆನಾಡಿನ ಜಿಲ್ಲೆಗಳಲ್ಲಿಯೂ ಇದೆ. ಇದರ ಮೈ ಮೇಲಿನ ಪಟ್ಟೆಗಳು ಕಟ್ಟುಹಾವಿನಂತೆ ಕಂಡುಬರುತ್ತವೆ. ಇದೇ ಜಾತಿಯಲ್ಲಿನ ನಾಲ್ಕು ಪ್ರಭೇದಗಳೂ (ಟ್ರಾವಂಕೂರೆನ್ಸಿಸ್, ಅಫಿನಿಸ್, ಆರ್ನೆನ್ಸಿಸ್ ಮತ್ತು ಬ್ರೆವಿಕಾಡ) ನಮ್ಮ ನಾಡಿನಲ್ಲಿ ಇವೆ. ಪಶ್ಚಿಮತೀರಕ್ಕೆ ಹರಿಯುವ ನದಿಗಳ ಅಳವೆಗಳಲ್ಲಿ ನರೂಲಿ ಹಾವು (ಆಕ್ರೋಕೊರ್ಡುಪ್ ಗ್ರಾನುಲೇಟಸ್) ವಾಸಿಸುತ್ತದೆ. ಇದು ನೀರಿನಲ್ಲಿ ಚೆನ್ನಾಗಿ ಈಜಲಾರದು. ಅಲ್ಲಿನ ಬೆಸ್ತರಿಗೆ ಮೀನು ಹಿಡಿಯುವ ಬಲೆಗಳಿಗೆ ಆಗಾಗ್ಯೆ ಇದು ಸಿಕ್ಕಿಹಾಕಿಕೊಳ್ಳುತ್ತಿರುತ್ತದೆ. ಇದು ಮೊಟ್ಟೆಗಳನ್ನಿಡುವುದರ ಬದಲು ಒಮ್ಮೆಗೆ ೬-೮ ಮರಿಗಳನ್ನು ಈಯುತ್ತದೆ. ಕರೀಹಸುರು ಹಾವು (ಕ್ರೈಸೋಪೇಲಿಯ ಓರ್ನಾಟ) ಎಂಬುದು ಪಶ್ಚಿಮಘಟ್ಟದ ಕಾಡುಗಳಲ್ಲಿ ಇದೆ. ತಲೆ ಸಾಮಾನ್ಯವಾಗಿ ಕಪ್ಪು ಬಣ್ಣ. ಅದರ ಮೇಲೆ ಹಳದಿಯ ಅಥವಾ ಹಸಿರಿನ ಅಡ್ಡಾದಿಡ್ಡಿ ಮಚ್ಚೆಗೆರೆಗಳು. ಮರಗಳ ಕೊಂಬೆಗಳಿಗೆ ತನ್ನ ದೇಹದಿಂದ ಸುರುಳಿಸುತ್ತಿ ತೂಗಾಡುವುದು ಇದರ ವೈಶಿಷ್ಟ್ಯ. ಆಗಾಗ್ಯೆ ವಸತಿಗೃಹಗಳನ್ನು ಪ್ರವೇಶಿಸುವ ತೋಟದ ಹಾವಿಗೆ ಲೈಕೊಡಾನ್ ಆಲಿಕಸ್ ಎಂದು ಹೆಸರು. ಇದು ಸಾಮಾನ್ಯವಾಗಿ ನಿಶಾಚರಪ್ರಾಣಿ. ಮರಗಳನ್ನು ಸುಲಭವಾಗಿ ಹತ್ತಬಲ್ಲುದು. ಭೂಮಿಯ ಮೇಲೆ ಅದು ಚುರುಕಿನಿಂದ ಹರಿದಾಡಲಾರದು. ಚೌಕಳಿ ಹಾವು. ಒಳ್ಳೆ ಹಾವು ಅಥವಾ ನೀರು ಹಾವು (ನಾತ್ರಿಕ್ ಪಿಸ್ಕಟಾರ್) ನೀರ ವಸತಿಯ ಬಳಿ ಕಂಡುಬರುತ್ತದೆ. ಕೆಲವು ಸಂದರ್ಭಗಳಲ್ಲಿ ಬತ್ತದ ಗದ್ದೆಗಳನ್ನು ಪ್ರವೇಶಿಸುವುದುಂಟು. ಹಸಿರು ಕಟ್ಟಿನ ಹಾವು (ಮ್ಯಾಕ್ರೋಪಿಸ್ತೊಡಾನ್ ಪ್ಲಂಬಿಕೊಲಾರ್) ಬೆಟ್ಟಗುಡ್ಡಗಳಿರುವ ಮೈದಾನ ಪ್ರದೇಶಗಳಲ್ಲಿ ಆಗಾಗ್ಗೆ ಕಂಡುಬರುತ್ತದೆ. ಇದನ್ನು ಕೆಣಕಿದರೆ ನಾಗರಹಾವಿನಂತೆ ಹೆಡೆ ಎತ್ತುತ್ತದೆ. ಎರಡು ಬಗೆಯ ಚೆಂಗಿ ಹಾವುಗಳು ಕನ್ನಡ ನಾಡಿನಲ್ಲಿವೆ. ಒಂದು ಬೊಯ್ಗ ಟ್ರೈಗೊನೇಟ ಮತ್ತು ಬೊ. ಸಿಲೋಸೆನ್ಸಸ್. ಮೊದಲನೆಯದು ನಾಡಿನಾದ್ಯಂತ ಕಂಡುಬಂದರೆ ಎರಡನೆಯದು ಪಶ್ಚಿಮಘಟ್ಟಗಳಿಗೆ ಸೀಮಿತವಾಗಿದೆ. ಹಸಿರು ಎಲೆ ಹಾವು ಅಥವಾ ಹಸಿರು ಹಾವು (ಡ್ರೆಯೋಫಿಸ್ ನಾಸೂಟಸ್) ಎಲ್ಲ ಕಡೆಯೂ ಉಂಟು. ಇದರ ವಾಸ ಸಾಮಾನ್ಯವಾಗಿ ಹಸುರು ತುಂಬಿದ ಬೇಲಿ, ಎತ್ತರವಾಗಿ ಬೆಳೆದ ಹುಲ್ಲು. ದೇಹ ಬಲು ಉದ್ದ. ಸುಮಾರು ೧೯೪ ಸೆಂಮೀ. ಇವೇ ಅಲ್ಲದೆ ಇನ್ನೂ ಇತರ ವಿಷರಹಿತ ಹಾವುಗಳು (ಕೊಲುಬೆರ್, ಲಿಯೋಪೆಲ್ಟಿಸ್, ಕೋರೋನೆಲ್ಲ, ಅಹೆಟುಲ್ಲ ಇತ್ಯಾದಿ) ಈ ರಾಜ್ಯದಲ್ಲಿವೆ. ಅತ್ಯಂತ ವಿಷಪುರಿತ ಹಾವುಗಳ ಸಂಖ್ಯೆ ಕಡಿಮೆಯಾಗಿದ್ದರೂ ಅವುಗಳ ಅಪಾಯದ ಪ್ರಭಾವ ಬಹಳ ದೊಡ್ಡದು. ನಾಡಿನ ಕಡಲ ನೀರಿನಲ್ಲಿ ವಾಸಿಸುವ ಕಡಲ ಹಾವುಗಳು ಅತ್ಯಂತ ವಿಷಪುರಿತವಾದುವು. ಇವುಗಳ ಬಾಲ ಹುಟ್ಟಿನಂತೆ ಚಪ್ಪಟೆಯಾಗಿದ್ದು ಚಲನೆಗೆ ಬಲು ನೆರವಾಗುತ್ತವೆ. ಹೈಡ್ರೋಫಿಸ್ ಸಿರುಲೆಸೆನ್ಸ್‌ ಜಾತಿಯ ಕಡಲ ಹಾವು ಸಾಮಾನ್ಯವಾಗಿ ಬೆಸ್ತರ ಮೀನು ಬಲೆಗೆ ಬೀಳುತ್ತದೆ. ಭೂಮಿಯ ಮೇಲೆ ಇದು ನಿಸ್ಸಹಾಯಕ. ಬೆಸ್ತರು ಬಲೆಗೆ ಬಿದ್ದ ಈ ಹಾವುಗಳನ್ನು ಕೈಗಳಿಂದಲೇ ಹಿಡಿದು ನೀರಿಗೊ ದಡಕ್ಕೊ ಬಿಸಾಡುತ್ತಾರೆ. ಇದೇ ಅಲ್ಲದೆ ಲಾಟಿಕೌಡ, ಪ್ರೆಸ್ಕುಟಾಟ, ಎನ್ಹೈಡ್ರಿನ, ಹೈಡ್ರೋಫಿಸ್, ಲಾಪೆಮಿಸ್, ಮೈಕ್ರೋಸೆಫಾಲೋಫಿಸ್ ಮತ್ತು ಪೆಲಾಮಿಸ್ ಜಾತಿಯ ಕಡಲ ಹಾವುಗಳು ನಾಡಿನ ಕಡಲಿನಲ್ಲಿ ದೊರಕುತ್ತವೆ. ಕಟ್ಟುಹಾವು ಅಥವಾ ಕಡಂಬಳ (ಕ್ರೈಟ್, ಬಂಗಾರಸ್ ಸಿರೂಲಿಯಸ್) ನಾಡಿನಾದ್ಯಂತ ಕಂಡುಬರುತ್ತದೆ. ಇದರ ದೇಹದ ಬಣ್ಣ ಕಪ್ಪು ಮಿಶ್ರಿತವಾದ ನೀಲಿ. ಬಿಳಿಯ ಕಟ್ಟುಗಳು ದೇಹದಾದ್ಯಂತ ಹರಡಿವೆ. ನಾಗರಹಾವು (ನಾಜ ನಾಜ) ಹೆಡೆಯೆತ್ತಿ ಆಡುವ ವಿಷಸರ್ಪ. ಇದು ಸಾಕಷ್ಟು ಇದೆ. ಕೃಷ್ಣಸರ್ಪ ಅಥವಾ ಕಾಳಿಂಗಸರ್ಪ (ನಾಜ ಹನ್ನ) ಪಶ್ಚಿಮ ಘಟ್ಟದ ಕಾಡುಗಳಲ್ಲಿ ಇದೆ. ನಾಗರಹಾವಿಗೆ ಹೆಡೆಯ ಮೇಲೆ ಕನ್ನಡಕದಂಥ ಮಚ್ಚೆಯುಂಟು. ಕೃಷ್ಣ ಸರ್ಪದ ತಲೆಯ ಹಿಂದಿನ ದೇಹಭಾಗದ ಸುತ್ತು ೧೦-೧೫ ಬಿಳಿಯ ಪಟ್ಟೆಗಳಿವೆ. ಇದು ೫೪೦ ಸೆಂಮೀ ವರೆಗೂ ಬೆಳೆಯಬಲ್ಲುದು.
	
ಮಂಡಲದ ಹಾವಿಗೆ (ರಸ್ಸೆಲ್ಸ್‌ ವೈಪರ್) ಕನ್ನಡಿ ಹಾವು, ಬಲಿವಡಕ ಹಾವು ಎಂಬ ಪರ್ಯಾಯ ಹೆಸರುಗಳೂ ಇವೆ. ಇದರ ವೈಜ್ಞಾನಿಕ ನಾಮ ವೈಪೆರ ರಸ್ಸೇಲಿ. ಇದು ನಮ್ಮ ನಾಡಿನಾದ್ಯಂತ ಸಾಮಾನ್ಯವಾಗಿ ಕಂಡುಬರುತ್ತದೆ. ಬೂದು ದೇಹದ ಮೇಲೆ ಮೂರು ಸಾಲಿನಲ್ಲಿ ದೊಡ್ಡ ದೊಡ್ಡ ಮಚ್ಚೆಗಳಿವೆ. ಬೆನ್ನಿನ ಮೇಲಿರುವ ಮಚ್ಚೆಗಳು ಪಕ್ಕದ ಮಚ್ಚೆಗಳಿಗಿಂತ ಸ್ವಲ್ಪ ದೊಡ್ಡವು. ಸಾಮಾನ್ಯವಾಗಿ ಬಂಡೆಗಳ ಹಾಗೂ ಪೊದೆಗಳ ಬಳಿಯ ಪರಿಸರದ ಬಣ್ಣದಂತೆಯೇ ಕಂಡುಬರುತ್ತದೆ. ಇದು ಮೂರು ದಿನಗಳ ಹೆರಿಗೆಯಲ್ಲಿ ೯೭ ಮರಿಗಳನ್ನು ಹೆರಬಲ್ಲುದು ಕಲ್ಲು ಹಾವು (ಎಕಿಸ್ ಕ್ಯಾರಿನೇಟಸ್) ಮಂಡಲದ ಹಾವಿನ ಹತ್ತಿರ ಸಂಬಂಧಿ; ನಾಡಿನಾದ್ಯಂತ ಹರಡಿದೆ. ತಲೆಯ ಮೇಲಿನ ಬಾಣದ ಗುರುತಿನಿಂದ ಸುಲಭವಾಗಿ ಇದನ್ನು ಗುರುತಿಸಬಹುದು. ದೇಹ ಬಣ್ಣ ಬೂದುಮಿಶ್ರಿತವಾಗಿದೆ, ತಳಭಾಗ ಬಿಳುಪೂ.  ದೇಹದ ಮೇಲೆ ಅಲೆಅಲೆಗಳ ವಿನ್ಯಾಸದಂತಿರುವ ಎರಡು ರೇಖೆಗಳು ತಲೆಯಿಂದ ಕಾಲಿನವರೆಗೂ ವ್ಯಾಪಿಸಿದೆ. ಇದು ಕೂಡ ಮರಿಗಳನ್ನು ಈನತಕ್ಕ ಹಾವು. ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಮತ್ತು ಆಗಾಗ್ಯೆ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಹಸುರು ಮಂಡಲದ ಹಾವು (ಟ್ರೈ ಮೆರೆಸುರಸ್ ಗ್ರಾಮಿನೆಯಸ್) ಸಾಮಾನ್ಯವಾಗಿ ಹುಲ್ಲು ಅಥವಾ ಬಿದಿರು ಮೆಳೆಗಳಲ್ಲಿ ಆಸರೆ ಪಡೆದು ಪರಿಸರದಲ್ಲಿ ಐಕ್ಯವಾಗಿರುತ್ತದೆ. ಇದೂ ಕೂಡ ಮರಿಗಳನ್ನು ಈನುತ್ತದೆ. ಟ್ರೈಮೆರೆಸುರಸ್ ಜಾತಿಗೆ ಸಂಬಂಧಿಸಿದಂತೆ ಅದರ ಇತರ ಮೂರು (ಮ್ಯಾಕ್ರೋಲೆಪಿಸ್, ಮಲಬಾರಿಕಸ್, ಸ್ಟ್ರಿಗೇಟಸ್) ಪ್ರಭೇದಗಳು ಕಂಡುಬರುತ್ತದೆ. ಉತ್ತರ ಕರ್ಣಾಟಕದ ಸರಹದ್ದಿನಲ್ಲಿರುವ ಗೂನು ಮೂಗಿನ ಮಂಡಲದ ಹಾವು (ಆನ್ಸಿಸ್ಟ್ರೊಡಾನ್ ಹಿಪ್ಪಾಲೆ) ಕೂಡ ವಿಷಪುರಿತ ಹಾವು.

ಅಂಫೀಬಿಯ ವರ್ಗದ ಪ್ರತಿನಿಧಿಯಾಗಿ ಕಪ್ಪೆ, ನೆಲಗಪ್ಪೆ, ಹಿತ್ತಲಮಂಡಲ, ರಾನಹೈಲ, ನನ್ನೊಬಟ್ರಾಕಸ್, ಫಿಲೋಟಸ್, ರಾಮನೆಲ್ಲ. ಮೈಕ್ರೊಹೈಲ ಮೊದಲಾದ ಜಾತಿಯ ಕಪ್ಪೆಗಳೂ ಬ್ಯೂಫೋ, ಯೂಪರೂಡಾನ್ ಮೊದಲಾದ ನೆಲಗಪ್ಪೆಯ ಜಾತಿಗಳೂ ಕಂಡುಬರುತ್ತವೆ. ಕಾಲುಗಳಿಲ್ಲದ ಭೂ ಜಲಚರಿ ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಲ್ಲಿ ಸಿಗುವ ಹಿತ್ತಲ ಮಂಡಲ (ಇಕ್ತಿಯೋಫಿಸ್ ಗ್ಲೊಟಿನೋಸಸ್). ಇದು ಜೌಗು ಪ್ರದೇಶದಲ್ಲಿ ಬಿಲದಲ್ಲಿ ಹುದುಗಿ ಜೀವಿಸುತ್ತದೆ. ಹೆಣ್ಣು ಸಂತಾನೋತ್ಪತ್ತಿ ಕಾಲದಲ್ಲಿ ಮೊಟ್ಟೆಗಳ ಗೊಂಚಲಿನ ಸುತ್ತ ತನ್ನ ದೇಹವನ್ನು ಸುರುಳಿಯಂತೆ ಸುತ್ತಿ ಸಂತಾನ ಪಾಲನೆ ಮಾಡುತ್ತದೆ.

ಮೀನಿನ ಸಂಪತ್ತು ಕರ್ಣಾಟಕದಲ್ಲಿ ಅಧಿಕ. ನಾನಾ ತೆರದ ಮೀನುಗಳು ಕಡಲು, ನದಿ, ಕೆರೆ, ಕಟ್ಟೆ ಮೊದಲಾದುವುಗಳಲ್ಲಿ ದೊರಕುತ್ತವೆ. ಸಿಹಿನೀರಿನಲ್ಲಿ ಸಾಮಾನ್ಯವಾಗಿ ಬರಿಯ ಎಲುಬು ಮೀನುಗಳು ಕಂಡು ಬಂದರೆ, ಕಡಲಿನ ಉಪ್ಪು ನೀರಿನಲ್ಲಿ ಎಲುಬು ಮತ್ತು ಮೆಲ್ಲೆಲುಬು ಮೀನುಗಳೆರಡೂ ಜೀವಿಸುತ್ತವೆ.

ಕಡಲಿನ ಮೆಲ್ಲೆಲುಬು ಮೀನುಗಳು ವಿವಿಧ ಬಗೆಯವು. ಇವುಗಳಲ್ಲಿ ನೇರವಾಗಿ ಮರಿಗಳನ್ನೇ ಹೆರುವಂಥ ಸೊರಮೀನು ಅಥವಾ ಚಾಟೇಮೀನು (ಸ್ಕೋಲಿಯೋಡಾನ್), ಕೊಡತಿಮೀನು (ಲೈಗೋನಬ್ಲಾಕಿ) ಮತ್ತು ಹುಲಿಮೀನು (ಸ್ಟೀಗೋಸ್ಟೋಮ) ಮೊದಲಾದುವೂ ಮೊಟ್ಟೆಗಳನ್ನಿಡುವಂಥ ಚಿಟ್ಟೆಮೀನು (ರೇ ಫಿಷ್), ನೀರುಮಂದಿ ಮೀನು (ಸ್ಕೇಟ್), ಗರಗಸ ಮೀನು (ಪ್ರಿಸ್ಟಿಸ್) ಮುಂತಾದವೂ ಮುಖ್ಯವಾದುವು. ಇವುಗಳಲ್ಲಿ ಕೆಲವನ್ನು ಆಹಾರವಾಗಿ ಬಳಸುತ್ತಾರೆ. ದೊಡ್ಡ ಗಾತ್ರದವುಗಳ ಈಲಿಯಿಂದ ಎಣ್ಣೆಯನ್ನು ತೆಗೆಯುತ್ತಾರೆ. ಎಲುಬು ಮೀನುಗಳಲ್ಲಿ ಮುಖ್ಯವಾದುವು ಇವು - ಮ್ಯಾಕರಲ್, ಬೈಗೆ ಅಥವಾ ಬೂತಾಯಿ (ಸಾರ್ಡಿನ್), ಬಂಗಡ (ಸ್ಕ್ಯಾಂಬರ್ ಮೈಕ್ರೋಲೆಪಿಡೋಟಸ್) ಥೇಡೆ (ಈರಿಯಸ್ ಡಸ್ಸುಮಿಯರಿ), ದೊರಸ್ (ಕೈರೋ ಸೆಂಟ್ರಸ್ ದೊರಸ್) ಮಲೆಟ್, ಪಾಂಫ್ರೆಟ್ (ಸ್ಟ್ರನೇಟಿಯಸ್), ಒಂದು ಬಗೆಯ ಹಾವು ಮೀನು (ಓಫಿಕ್ತಿಸ್ ಬೋರೊ) ಮತ್ತು ಟ್ಯೂನ. ಇವುಗಳಲ್ಲಿ ಬಲುರುಚಿಯಾದ ಮೀನುಗಳೆಂದು ಹೆಸರಾದ ಮ್ಯಾಕರಲ್, ಬೈಗೆ, ಬಂಗಡ ಮುಂತಾದುವನ್ನು ಬೆಸ್ತರು ಮಾರಿ ಬಲೆಗಳನ್ನು ಬೀಸಿ ರಾಶಿಗಟ್ಟಲೆಯಾಗಿ ಹಿಡಿಯುತ್ತಾರೆ. ಕಡಲು ಮೀನುಗಳೆಲ್ಲ ಹೆಚ್ಚಾಗಿ ಸಮುದ್ರದ ಉಪ್ಪು ನೀರಿಗೇ ಸೀಮಿತವಾಗಿದ್ದರೂ ಕೆಲವು ಬಾರಿ ನದೀಮುಖಜ ಪ್ರದೇಶಗಳಲ್ಲೂ ಕಂಡುಬರುವುದುಂಟು.

ನದಿಗಳಲ್ಲಿ ದೊರಕುವ ಮೀನುಗಳಲ್ಲಿ ಮುಖ್ಯವಾದುವು ಇವು- ಕಾರ್ಪ್, ಕಟ್ಲ ಮೀನು (ಕಾಟ್ಲ ಕಾಟ್ಲ), ರೋಹಮೀನು ಅಥವಾ ಮಂಡಕಾರ್ಲು (ಲೇಬಿಯೋ ರೋಹಿತ), ಕೆಮ್ಲೀನು (ಲೇಬಿಯೊ ಫಿಂಬ್ರಿಯೇಟಸ್), ಕುರಿಮೀನು (ಲೇ. ಕಾಲ್ಬಸ್), ಕಮ್ಮಚ್ಚಲು (ಲೇ. ಕಲ್ಬಾಸು), ಮಷೀರ್ ಮೀನು (ಬಾರ್ಬಸ್), ಕನ್ನಡಿ ಮೀನು (ಮಿರರ್ ಕಾರ್ಪ್), ಗೆಂಡೆಮೀನು (ಪಂಕ್ಟಿಯಸ್ ಕರ್ನಾಟಿಕಸ್), ಕೂರಲು ಮೀನು (ಪಂ. ಡೂಬಿಯಸ್) ಬೆಟ್ಟಗುಡ್ಡಗಳ ಝರಿಗಳಲ್ಲಿ ಅರ್ಜಮೀನು (ಸಿರಿನ ರೇಬ ಮತ್ತು ಸುರಾಯಿ ಅಥವಾ ಮೃಗಾಲಮೀನು (ಸಿ. ಮೃಗಾಲ) ಸಿಕ್ಕುತ್ತವೆ. ಮೀಸೆ ಮೀನು (ಕ್ಯಾಟ್ ಫಿಷ್), ಬಾಳೆಮೀನು (ವಲಾಗೊ ಅಟ್ಟು), ಕೆತ್ತಲು ಮೀನು (ಮಿಸ್ಟಸ್ ಜಾತಿ) ಮೊದಲಾದ ದೊಡ್ಡ ಗಾತ್ರದ ಮೀನುಗಳೂ ಚೇಳುಮೀನು (ಹೆಟರೋ ನ್ಯೂಸ್ಪಸ್ ಫಾಸಿಲಿಸ್), ಆಣಿ ಮೀನು (ಕ್ಲೇರಿಯಸ್ ಜಾತಿ) ಮುಂತಾದ ಸಣ್ಣಗಾತ್ರದ ಮೀನುಗಳೂ ಕೆರೆ ಕಟ್ಟೆಗಳಲ್ಲಿ ಸಾಮಾನ್ಯ. ಸಣ್ಣಗಾತ್ರದ ಮೀನುಗಳು ತಮ್ಮಲ್ಲಿನ ಅನುಷಂಗಿಕ ಶ್ವಸನಾಂಗಗಳ ಸಹಾಯದಿಂದ ಗಾಳಿಯನ್ನೇ ನೇರವಾಗಿ ಉಸಿರಾಡಬಲ್ಲವು. ಹರಿಯುವ ನದಿ ತೊರೆಗಳಲ್ಲೂ ಕೆರೆ ಕಟ್ಟೆಗಳಲ್ಲೂ ಜೀವಿಸುವ ಮೀನುಗಳೂ ಇವೆ; ಚೌಲುಮೀನು (ಚಾನಾ ಮರೂಲಿಯಸ್), ಕೊರವಮೀನು (ಚಾ. ಸ್ಟ್ರಯೇಟಸ್) ಕುಚ್ಚುಮೀನು (ಚಾ. ಗೌಡ), ಹೂವುಮೀನು (ಚಾ. ಪಂಕ್ಟೇಟಸ್), ಹಾವು ಮೀನು (ಮಸ್ಟಸೆಂಬ್ಲಸ್ ಪಂಕಾಲಸ್), ಚಪ್ಪಲುಮೀನು (ನೋಟಾಪ್ಟಿರಸ್), ಬೆಳಚಿಮೀನು (ಚೇಲ), ಅಗಸಗಿತ್ತಿಮೀನು (ಬಾರಿಲಿಯಸ್)- ಇವು ಮುಖ್ಯವಾದವು. ಸಿಹಿನೀರಿನ ಮೀನುಗಳಲ್ಲಿ ಬಹುಬಗೆಯವು ತಿನ್ನಲು ಯೋಗ್ಯವಾದುವಾದರೂ ಕಾರ್ಪ್, ಮೀಸೆ ಮೀನು, ಬಾಳೆಮೀನು, ಗೆಂಡೆಮೀನು, ಔಲುಮೀನು, ಹಾವುಮೀನು, ಮಷಿರ್ಮೀನು ಬಲುರುಚಿಯಾದ ಮೀನುಗಳೆಂದು ಹೆಸರಾಗಿವೆ.

ಬೆನ್ನೆಲುಬಿಲ್ಲದ ಅಥವಾ ಅಕಶೇರುಕ ಪ್ರಾಣಿಗಳೂ ವಿಪುಲವಾಗಿವೆ. ಪ್ರೋಟೋಜೋ಼ವ ವಂಶದ ಅಮೀಬ ಯೋಗ್ಲಿನ, ಪ್ಯಾರಮೀಸಿಯಂ, ವೊರ್ಟಿಸೆಲ, ಯುಪ್ಲಾಟಿಸ್, ಸ್ಪೈಲೋನಿಕೆಯ ಮೊದಲಾದ ಹಲವು ಜೀವಜಾತಿಗಳು ಕೆರೆಕೊಳ ಮೊದಲಾದ ಜಲಾಶಯಗಳಲ್ಲಿ ಕಂಡುಬರುತ್ತವೆ. ಮಲೇರಿಯ ಕಾಯಿಲೆಗೆ ಕಾರಣವಾದ ಪ್ಲಾಸ್ಮೋಡಿಯಂ ಜಾತಿಯ ಪರತಂತ್ರ ಜೀವಿಗಳು ರಾಸಾಯನಿಕಗಳ ಪ್ರಭಾವದಿಂದ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿವೆ. ಇವೇ ಅಲ್ಲದೆ, ಇತರ ಜೀವಿಗಳ ದೇಹಗಳ ಪರತಂತ್ರ ಜೀವಿಗಳಾಗಿರುವ ಎಂಟಿಮೀಬ ಉಪಲೈನ, ಬ್ಯಾಲು ಟೀಡಿಯಂ, ನಿಕ್ಟೋತೀರಸ್ ಮೊದಲಾದ ಪರತಂತ್ರ ಜೀವಿಗಳೂ ಕಂಡುಬರುತ್ತವೆ. ರೇಷ್ಮೆ ಹುಳುಗಳಿಗೆ ಉಪದ್ರವಕಾರಿಯಾದ ಕೆಲವು ಬಗೆಯ ಏಕಕೋಶಿಕ ಜೀವಿಗಳೂ ಇವೆ.

ಕೆಲವು ಬಗೆಯ ಸ್ಪಂಜು ಪ್ರಾಣಿಗಳು ಕಡಲಿನಲ್ಲಿ ದೊರೆಯುತ್ತವೆ. ಇವು ಸಣ್ಣ ಸಣ್ಣ ಗಿಡಗಳು ಬೆಳೆಯುವಂತೆ ನೀರಿನಲ್ಲಿ ಬೆಳೆಯುತ್ತವೆ. ಸೀಲೆಂಟರೇಟ ಗುಂಪಿನ ಪ್ರಾಣಿಗಳಲ್ಲಿ ಹೈಡ್ರ ಕೆರೆಕೊಳಗಳಲ್ಲಿ ಕಂಡುಬರುತ್ತದೆ. ಉಳಿದೆಲ್ಲ ಬಗೆಯ ಜೀವಿಗಳು ಕಡಲಿನಲ್ಲಿ ವಾಸಿಸುತ್ತವೆ. ಬಂಡೆಗೆ ಅಂಟಿಕೊಂಡು ನೀರಿನಲ್ಲಿ ವಾಸಿಸುವ ಕಡಲ ಹೂಗಳು (ಸೀ ಅನಿಮೋನು) ವರ್ಣರಂಜಿತವಾಗಿವೆ. ನದಿಮುಖಗಳಲ್ಲಿ ಕಡಲ ಕೆರೆಗಳಲ್ಲಿ ಜೆಲ್ಲಿಫಿಷ್ ಅಥವಾ ಅಂಬಲಿ ಮೀನುಗಳು ತೇಲುತ್ತಿರುವುದು ಸಾಮಾನ್ಯ ದೃಶ್ಯ.ಅಲ್ಲಿಯ ಆಸುಪಾಸು ಜನರು ಇದನ್ನು ಸೂರ್ಯನ ಸಿಂಬಳ ಎಂದು ಕರೆಯುವುದುಂಟು. 
ಚಪ್ಪಟೆ ದೇಹದ ಪ್ರಾಣಿಗುಂಪಿನಲ್ಲಿ ವಿವಿಧ ಜಾತಿಯ ಸ್ವತಂತ್ರ ಜೀವಿಗಳನ್ನು ಜೌಗುಪ್ರದೇಶದಲ್ಲಿ ಕಲ್ಲುಗಳ ಕೆಳಗೆ ಹರಿದಾಡುವುದನ್ನು ಕಾಣಬಹುದು. ಪರತಂತ್ರ ಜೀವಿಗಳಾದ ಲಾಡಿಹುಳುಗಳೂ ಪಕ್ಷಿ, ಸ್ತನಿ ಮೊದಲಾದುವುಗಳ ಕರುಳಿನಲ್ಲೂ ಜೀವಿಸುತ್ತವೆ. ಇವನ್ನು ಕೋಲಾರ, ತುಮಕೂರು, ಚಿತ್ರದುರ್ಗ ಮೊದಲಾದ ಜಿಲ್ಲೆಗಳಲ್ಲಿ ಕಾಣಬಹುದು. ಕುರಿಗಳ ಯಕೃತ್ತಿನಲ್ಲಿ ಪರತಂತ್ರ ಜೀವಿ ವಾಸಿಸುತ್ತವೆ. ದುಂಡುಹುಳುಗಳ ವಂಶದ ಜೀವಿಗಳೆಲ್ಲವೂ ಪರತಂತ್ರ ಜೀವಿಗಳು. ಆನೆಕಾಲು ರೋಗಕ್ಕೆ ಕಾರಣವಾದ ದುಂಡುಹುಳು ಕಡಲು ತೀರಪ್ರದೇಶಗಳ ಜಿಲ್ಲೆಗಳಲ್ಲಿ ವ್ಯಾಪಕವಾಗಿದೆ. ಶೇ. ೯೦-೯೫ ಜನರ ಹೊಟ್ಟೆಯಲ್ಲಿ ಜಂತುಹುಳು, ಗುದದ ಹುಳುಗಳು ಸಾಮಾನ್ಯ. ನಾರುಹುಣ್ಣಿನ ರೋಗವನ್ನುಂಟುಮಾಡುವ ಡ್ರಾಕಂಕ್ಯುಲಸ್ ಮೆಡಿನೆಸ್ಸಿಸ್ ಬಳ್ಳಾರಿ ಮತ್ತು ಚಿತ್ರದುರ್ಗಗಳಲ್ಲಿ ಹರಡಿವೆ. ಇದೇ ಅಲ್ಲದೆ ಸಸ್ಯವರ್ಗ ಮತ್ತು ಇತರ ಜೀವಿಗಳಲ್ಲಿ ಪರತಂತ್ರವಾಗಿರುವ ದುಂಡುಹುಳುಗಳು ಅನೇಕವಿವೆ.

ವಲಯವಂತವಂಶದ ಹುಳುಗಳ ಪ್ರತಿನಿಧಿಗಳು ಅನೇಕ ಜಾತಿಗಳಿಗೆ ಸಂಬಂಧಿಸಿವೆ. ಕಡಲಿನಲ್ಲಿರುವ ನೀರಿಸ್ ಮೊದಲಾದ ಸ್ವತಂತ್ರ ಜೀವಿಗಳು ಕಡಲ ತೀರದ ಬಂಡೆಗಳ ಬಿರುಕುಗಳಲ್ಲಿ ವಾಸಿಸುತ್ತವೆ. ೧೦-೧೫ ಬಗೆಯ ಎರೆಹುಳುಗಳಿವೆ. ಇವನ್ನು ಕೆಲವು ಕಡೆ ಭೂನಾಗವೆಂದೂ ಕರೆಯುವುದುಂಟು. ಜೌಗು ಪ್ರದೇಶದಲ್ಲಿ ಹಾಗೂ ನೀರಿನ ಆಸರೆಯಲ್ಲಿ ತಾತ್ಕಾಲಿಕ ಪರತಂತ್ರವಾಗಿ ಜೀವಿಸುವ ಜಿಗಣಿಗಳು ನಾಡಿನ ಹಲವೆಡೆ ದೊರೆತರೂ ಮಲೆನಾಡಿನ ಕಾಡುಗಳಲ್ಲಿ ಅವು ಅಧಿಕ. ಇವಕ್ಕೆ ಕಶೇರುಕಗಳ ರಕ್ತವೇ ಆಹಾರ. ಹಲವಾರು ಜಾತಿಯ ಬೇರೆ ಬೇರೆ ಬಗೆಯ ಜಿಗಣಿಗಳು ಮೃದ್ವಂಗಿ ಮೊದಲಾದ ಪ್ರಾಣಿಗಳಲ್ಲಿ ಜೀವನ ಸಾಗಿಸುವುದೂ ಕಂಡುಬರುತ್ತದೆ.

ಮೃದ್ವಂಗಿಗಳ ಪ್ರತಿನಿಧಿಗಳೂ ಅಪರಿಮಿತ. ಕಪ್ಪೆಚಿಪ್ಪಿನ ಪ್ರಾಣಿಗಳು ನದಿ ಮತ್ತು ದೊಡ್ಡ ಕೆರೆಗಳಲ್ಲಿ ವಾಸಿಸುತ್ತವೆ. ಪೈಲಜಾತಿಯ ಹಾಗೂ ಇತರ ಬಗೆಯ ಬಸವನ ಹುಳುಗಳು ಬೆಂಗಳೂರು ಮೈಸೂರು ಮಂಡ್ಯ ತುಮಕೂರು ಹಾಸನ ಜಿಲ್ಲೆಗಳ ತೋಟಗಳಲ್ಲಿ ಕೆರೆಕಾಲುವೆಗಳಲ್ಲಿ ಸರ್ವೇಸಾಧಾರಣವಾಗಿ ಕಂಡುಬರುವ ಪ್ರಾಣಿಗಳು. ಸಮುದ್ರದ ದಂಡೆಯಲ್ಲಿ ಮೃದ್ವಂಗಿಗಳ ವಿವಿಧ ಜಾತಿಗಳು ವಿಪುಲವಾಗಿವೆ. ಕೈಟಾನ್ ಎಂಬ ಮೃದ್ವಂಗಿ ಕಡಲ ಬಂಡೆಗಳಿಗೆ ಅಂಟಿಕೊಂಡು ಜೀವಿಸುತ್ತದೆ. ವಿವಿಧ ಜಾತಿಯ ಶಂಖ ಪ್ರಾಣಿಗಳು ಕರ್ನಾಟಕದ ಕಡಲ ತೀರದಲ್ಲಿ ಬಹುವಾಗಿವೆ. ಬೆಸ್ತರ ಬಲೆಗೆ ಲಾಲಿಗೊ ಸೆಪಿಯ ಮೊದಲಾದ ಶಿರಪಾದಿಗಳು ಬೀಳುತ್ತವೆ. ದೊಡ್ಡ ದೊಡ್ಡ ಸೆಪಿಯಗಳನ್ನು ಕಡಲ ತೀರದ ಜನರು ಆಹಾರವನ್ನಾಗಿ ಉಪಯೋಗಿಸುವುದುಂಟು. ಕಂಟಕಚರ್ಮಿಗಳು, ಕಡಲತೀರಗಳಿಗೆ ಮಾತ್ರ ಸೀಮಿತ. ಮುಳ್ಳುಗೊಂಡೆ (ಸೀ ಅರ್ಚಿನ್) ಮತ್ತು ಪೆಡಸುನಕ್ಷತ್ರಗಳೇ (ಬ್ರಿಟಲ್ಸ್ಟಾರ್) ನಕ್ಷತ್ರಮೀನುಗಳಿಗಿಂತ ಅಧಿಕ ಪ್ರಮಾಣದಲ್ಲಿ ಕಂಡುಬರುತ್ತವೆ. ಇವುಗಳ ಜಾತಿಯ ಸಂಖ್ಯೆಯೂ ಹೆಚ್ಚು. ಕಡಲ ಸೌತೆ, ಕಡಲ ಲಿಲ್ಲಿಗಳೂ ಕರ್ನಾಟಕದ ಕಡಲಿನಲ್ಲಿ ದೊರೆಯುತ್ತವೆ. ಸಂಧಿಪದಿ ವಂಶದ ಪ್ರಾಣಿಸಂಪತ್ತು ಹೇರಳವಾಗಿದೆ ; ಮತ್ತು ವಿಭಿನ್ನವಾಗಿದೆ. ಬಗೆಬಗೆಯ ಸಿಗಡಿ ಚಿಟ್ಲಿ, ಬೆಣಸ, ನಳ್ಳಿ, ಏಡಿ ಮೊದಲಾದವು ಈ ವಂಶಕ್ಕೆ ಸೇರಿದವು. ಇವು ಸಾಮಾನ್ಯವಾಗಿ ಮನುಷ್ಯನ ಆಹಾರ. ಕೀಟವರ್ಗದಲ್ಲಿ ಮನುಷ್ಯನ ದವಸಧಾನ್ಯಗಳಿಗೆ ಹಾಗೂ ಸಾಗುವಳಿ ಬೆಳೆಗಳಿಗೆ ಉಪದ್ರವವನ್ನುಂಟುಮಾಡುವ ಕೀಟಗಳಿವೆ. ಮಲೇರಿಯ, ಆನೆಕಾಲು ರೋಗ ಮೊದಲಾದ ಕಾಯಿಲೆಗಳನ್ನು ಹರಡುವ ಸೊಳ್ಳೆಗಳಿವೆ. ಮಿಡತೆ, ಮೊರವ, ಚಿಟ್ಟೆ ಮತ್ತು ಪತಂಗ, ಕೊಡತಿ ಹುಳು, ಜೀರುಂಡೆ ಮೊದಲಾದ ಕೀಟಗಳಲ್ಲಿ ಹಲವು ಬಗೆಯ ಜಾತಿಗಳಿವೆ. ಮಾನವನಿಗೆ ಉಪಕಾರಿಗಳಾದ ಜೇನುನೊಣ ಮತ್ತು ರೇಷ್ಮೆಹುಳು ಕೀಟವರ್ಗಕ್ಕೆ ಸೇರಿದವು. ಮೈಸೂರು, ಕೊಳ್ಳೇಗಾಲ, ನಂಜನಗೂಡು, ಚನ್ನಪಟ್ಟಣ, ರಾಮನಗರ ಮೊದಲಾದ ಮುಖ್ಯ ಊರುಗಳ ಮತ್ತು ಅದರ ಆಸುಪಾಸು ಹಳ್ಳಿಗಳಲ್ಲಿ ರೇಷ್ಮೆ ಹುಳುಗಳನ್ನು ಜನರು ಸಾಕಿ ಲಾಭ ಪಡೆದರೆ, ಕೊಡಗು, ಶಿವಮೊಗ್ಗಗಳನ್ನೊಳಗೊಂಡ ಮಲೆನಾಡಿನಲ್ಲಿ ನಿಶಾಚಾರಿಗಳಾದ ಜರಿ ಅಥವಾ ಶತಪದಿ (ಸ್ಕೊಲೋಪೆಂಡ್ರ) ಮನೆ ಮಠಗಳಲ್ಲಿ, ಬಯಲಿನಲ್ಲಿ ಕಂಡುಬರುತ್ತದೆ. ಇದು ಸಾಮಾನ್ಯವಾಗಿ ತೇವವಾಗಿರುವ ಶೀತಪ್ರದೇಶದಲ್ಲಿ ವಾಸಿಸುತ್ತದೆ. ಸಾವಿರಕಾಲು ಅಥವಾ ಚಿಗಟೆಗಳು ಬಯಲು ಜೀವಿಗಳು; ನಿಧಾನವಾಗಿ ನಡೆಯತಕ್ಕವು; ಮತ್ತು ಮುಟ್ಟಿದರೆ ಸುರುಳಿ ಸುತ್ತಿಕೊಂಡು ಉಂಡೆಯಾಗುವ ಪ್ರವೃತ್ತಿಯುಳ್ಳವು. ಉಣ್ಣೆ ಚಿಗಟಗಳು ನಾಯಿ ಹಸು ಮೊದಲಾದ ಸಸ್ತನಿಗಳ ಮೇಲೆ ಪರತಂತ್ರ ಜೀವನ ಸಾಗಿಸುವ ಜೀವಿಗಳು. ಜೇಡರಹುಳುಗಳ ಜೀವಜಾತಿಗಳಂತೂ ಅಧಿಕ ಸಂಖ್ಯೆಯಲ್ಲೇ ಕಂಡುಬರುತ್ತವೆ. ನೀಳಗಾಲಿನಗೋರ್ಕ ಹಾರ್ವೆಸ್ಟ್‌ಮ್ಯಾನ್ ಸಿಹಿನೀರಿನ ಮೇಲೆ ಮಂದೆಗೂಡಿ ವಾಸಿಸುತ್ತವೆ. ಇವನ್ನು ಬತ್ತ ಕಬ್ಬು ಮೊದಲಾದ ಸಾಗುವಳಿ ಪ್ರದೇಶದಲ್ಲಿ ಕಾಣಬಹುದು. ಚೇಳುಗಳಲ್ಲಿ ಎರಡು ಮೂರು ಬಗೆಗಳಿವೆ. ಅಡಕೆ, ತೆಂಗು, ಬಾಳೆತೋಟಗಳಲ್ಲಿ ಚೆಟ್ಟಿ ಚೇಳು ಸಾಮಾನ್ಯವಾಗಿ ದೊರಕುತ್ತವೆ. ಇವು ಚೇಳಿನಂತೆಯೇ ಇರುತ್ತವೆ. ಆದರೆ ಉದರ ಚಿಕ್ಕದು. ಕೊಂಡಿಯಿರುವುದಿಲ್ಲ.
ಹೀಗೆ ಕರ್ನಾಟಕದ ಪ್ರಾಣಿಸಂಪತ್ತು ವೈವಿಧ್ಯ ಹಾಗೂ ಸಂಪದ್ಭರಿತವಾಗಿದೆ.
(ಬಿ.ಎನ್.ಬಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ